ಅನ್ನಭಾಗ್ಯ, ಯುವ ನಿಧಿ ಗ್ಯಾರಂಟಿ ಯೋಜನಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

ಬೆಂಗಳೂರು: ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಪೈಕಿ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಮತ್ತು ಅನ್ನ ಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್) ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಶುಕ್ರವಾರ ನಡೆದ ಸಂಪುಟ ಸಭೆಯ ನಿರ್ಣಯದಂತೆ ಈ ಆದೇಶಗಳನ್ನು ಹೊರಡಿಸಲಾಗಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿವೆ.
ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಕುಟುಂಬಗಳ ಎಲ್ಲಾ ಸದಸ್ಯರಿಗೆ ಜುಲೈ ತಿಂಗಳಿನಿಂದ ತಲಾ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಯುವ ನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ಗಳನ್ನು 2023ರಲ್ಲಿ ಪೊರೈಸುವವರಿಗೆ ಅನುಕ್ರಮವಾಗಿ ತಿಂಗಳಿಗೆ 3000 ರೂ.ಗಳು ಹಾಗೂ 1500 ರೂ.ಗಳು ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಅನ್ನಭಾಗ್ಯ ಯೋಜನೆ ಮಾರ್ಗಸೂಚಿ
*ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆಜಿ ಅಹಾರ ಧಾನ್ಯ ಉಚಿತವಾಗಿ ಒದಗಿಸುತ್ತದೆ.
*ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ.
*ಈ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆಜಿಯಂತೆ ಒಟ್ಟು 40 ಕೆಜಿ, ಐವರು ಇದ್ದರೆ ಒಟ್ಟು 50 ಕಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ಪ್ರತಿ ವ್ಯಕ್ತಿಗೆ ಹತ್ತು ಕೆಜಿಯಂತೆ ಉಚಿತ ಅಕ್ಕಿ ಸಿಗಲಿದೆ.
*ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ 10 ಕೆಜಿಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
*ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆಜಿ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿ ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಒದಗಿಸುತ್ತದೆ. ಹೆಚ್ಚುವರಿ ಆಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಯುವ ನಿಧಿ ಮಾರ್ಗಸೂಚಿಗಳು
*ಉತ್ತೀರ್ಣರಾದ ನಂತರ ಆರು ತಿಂಗಳ ವರೆಗೂ ಯಾವುದೇ ಉದ್ಯೋಗ ದೊರಕದ ಕನ್ನಡಿಗರಿಗೆ ಯೋಜನೆ ಅನ್ವಯ.
*ಎರಡು ವರ್ಷಗಳ ವರೆಗೆ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬಹುದು. ಎರಡು ವರ್ಷಕ್ಕೂ ಮೊದಲೇ ಉದ್ಯೋಗ ದೊರೆತರೆ ಭತ್ಯೆಯನ್ನು ಸ್ಥಗಿತಗೊಳಿಸಲಾಗುತ್ತದೆ.
*ನಿರುದ್ಯೋಗದ ಕುರಿತು ಸ್ವತಂತ್ರ ಪರಿಶೀಲನೆ ನಡೆಸಲಾಗುತ್ತದೆ. ಉದ್ಯೋಗ ದೊರಕಿದರೂ ತಪ್ಪು ಮಾಹಿತಿ ನೀಡಿದರೆ ಅಥವಾ ಘೊಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
*ನೇರ ನಗದು ಪಾವತಿ ವ್ಯವಸ್ಥೆ ಮೂಲಕ ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಯಾರಿಗೆಲ್ಲ ಭತ್ಯೆ ಇಲ್ಲ?
*ಪದವಿ ಅಥವಾ ಡಿಪ್ಲೋಮಾ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವವರಿಗೆ ಭತ್ಯೆ ಇಲ್ಲ
*ಅಪ್ರೆಂಟಿಶಿಪ್ ವೇತನ ಪಡೆಯುತ್ತಿರುವವರು
*ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರಿಗೆ ಇಲ್ಲ
ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವರಿಗೆ ಇದು ಅನ್ಯವಾಗುವುದಿಲ್ಲ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement