‘ಮೂಢನಂಬಿಕೆ’ …: ಒಡಿಶಾದ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟ ಶಾಲಾ ಕಟ್ಟಡ ನೆಲಸಮ ಮಾಡುತ್ತಿರುವ ಆಡಳಿತ….!

ಕಳೆದ ವಾರ ಒಡಿಶಾದ ಬಾಲಸೋರ್‌ನ ಬಹನಾಗಾದಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇರಿಸಲಾಗಿದ್ದ ಶಾಲಾ ಕಟ್ಟಡವನ್ನು ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳು ಕೆಡವಲು ಪ್ರಾರಂಭಿಸಿದ್ದಾರೆ. ಇದು ತಾತ್ಕಾಲಿಕ ಶವಾಗಾರವಾಗಿ ಕಾರ್ಯನಿರ್ವಹಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಶಾಲಾ ಕಟ್ಟಡವನ್ನು ಕೆಡಹುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಬಹನಾಗಾ ಹೈಸ್ಕೂಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳನ್ನು ಒಳಗೊಂಡ ಅಪಘಾತದಲ್ಲಿ 280ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಶಾಲಾ ಆಡಳಿತ ಸಮಿತಿ ಸದಸ್ಯ ರಾಜಾರಾಮ ಮಹಾಪಾತ್ರ ಅವರು, ಶವಗಳನ್ನು ಇರಿಸಲಾಗಿದ್ದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಆದರೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಇದು ಮನವರಿಕೆಯಾಗುತ್ತಿಲ್ಲ. ಶಾಲೆಗೆ ಮಕ್ಕಳು ಬರುತ್ತಿಲ್ಲ. ಹೊಸ ಕಟ್ಟಡ ಸಿದ್ಧವಾದ ನಂತರ, ಶಾಲೆ ತೆರೆದ ನಂತರ ಮಕ್ಕಳು ಭಯಪಡದಂತೆ ಸ್ಥಳವನ್ನು ಪವಿತ್ರಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಹಿಂದಿನ ದಿನ ಜಿಲ್ಲಾಧಿಕಾರಿ ಕಟ್ಟಡಕ್ಕೆ ಭೇಟಿ ನೀಡಿದ್ದರು ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ. “ಭಯಪಡಲು ಏನೂ ಇಲ್ಲ … ಇಲ್ಲಿ ಯಾವುದೇ ಶಕ್ತಿಗಳಿಲ್ಲ. ಇದು ಕೇವಲ ಮೂಢನಂಬಿಕೆ. ಆದರೆ ಈಗ ಇದನ್ನು ತೆಗೆದು ಹೊಸ ಕಟ್ಟಡ ನಿರ್ಮಿಸಲಾಗುವುದು’ ಎಂದರು.
ಗುರುವಾರ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ ಶಾಲೆಗೆ ಭೇಟಿ ನೀಡಿ ಸಮಿತಿಯು ನಿರ್ಣಯ ಸಲ್ಲಿಸಿದರೆ ಅದನ್ನು ನೆಲಸಮಗೊಳಿಸಲಾಗುವುದು ಎಂದು ಹೇಳಿದರು. ಸಮಿತಿಯು ನಿರ್ಣಯವನ್ನು ಸಲ್ಲಿಸಿದ ನಂತರ ಶಾಲೆ ಕಟ್ಟಡ ಕೆಡಹುವ ಕಾರ್ಯ ಪ್ರಾರಂಭವಾಯಿತು.

ಪ್ರಮುಖ ಸುದ್ದಿ :-   ಪ್ರತಿವರ್ಷ ಜೂನ್ 25ರಂದು ʼಸಂವಿಧಾನ ಹತ್ಯಾ ದಿವಸʼ ಆಚರಣೆ; ಅಮಿತ್ ಶಾ ಘೋಷಣೆ

ರಕ್ತದಿಂದ ತೊಯ್ದ ಮತ್ತು ಛಿದ್ರಗೊಂಡ ದೇಹಗಳನ್ನು ಗುರುತಿಸುವ ಸಲುವಾಗಿ ಶಾಲೆಯ ಮೂರು ಕೊಠಡಿಗಳಲ್ಲಿ ಇರಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೌನ್ಸೆಲಿಂಗ್ ಅನ್ನು ಸಹ ಆಯೋಜಿಸಲಾಗುವುದು ಎಂದು ಒಡಿಶಾ ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಶ್ವತಿ ಎಸ್ ತಿಳಿಸಿದ್ದಾರೆ. “ಅನೇಕ ಶಿಕ್ಷಕರು ಮೃತದೇಹಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು. ಹಾಗಾಗಿ ಅವರಿಗೆ ಕೌನ್ಸೆಲಿಂಗ್ ಮಾಡಬೇಕಾಗಿದೆ” ಎಂದು ಅವರು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement