ದಟ್ಟ ಕಾಡಿನಲ್ಲೊಂದು ಪವಾಡ…: ಅಮೆಜಾನ್‌ ಕಾಡಿನಲ್ಲಿ ವಿಮಾನ ಅಪಘಾತವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಪುಟಾಣಿ ಮಕ್ಕಳು…!

ಬೊಗೋಟಾ: ವಿಮಾನ ಅಪಘಾತಕ್ಕೀಡಾದ ನಂತರ ಕೊಲಂಬಿಯಾದ ಅಮೆಜಾನಿನ ದಟ್ಟವಾದ ಮಳೆಕಾಡಿನಲ್ಲಿ ಕಾಣೆಯಾಗಿದ್ದ ನಾಲ್ವರು ಪುಟ್ಟ ಮಕ್ಕಳು 40 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ.
“ಇಂದು ನಾವು ಮಾಂತ್ರಿಕ ದಿನವನ್ನು ಹೊಂದಿದ್ದೇವೆ” ಎಂದು ಪೆಟ್ರೋ ಅವರು ಮಕ್ಕಳ ರಕ್ಷಣೆಯನ್ನು ಘೋಷಿಸಿದ ನಂತರ ರಾಜಧಾನಿ ಬೊಗೋಟಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
“ಅವರು ದುರ್ಬಲರಾಗಿದ್ದಾರೆ. ವೈದ್ಯರು ಅವರ ಆರೋಗ್ಯದ ಮೌಲ್ಯಮಾಪನ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. “ಇಡೀ ದೇಶಕ್ಕೆ ಸಂತೋಷದ ದಿನ. 40 ದಿನಗಳ ಹಿಂದೆ ಕೊಲಂಬಿಯಾದ ಅಮೇಜಾನ್‌ ದಟ್ಟಕಾಡಿನಲ್ಲಿ ಕಳೆದುಹೋದ 4 ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ” ಎಂದು ಅವರು ಟ್ವಿಟರಿನಲ್ಲಿ ಬರೆದಿದ್ದಾರೆ.
ಶುಕ್ರವಾರ ತಡರಾತ್ರಿ ರಕ್ಷಣಾ ಸಚಿವಾಲಯವು ಹಂಚಿಕೊಂಡ ವೀಡಿಯೊವು ಮಕ್ಕಳನ್ನು ಹೆಲಿಕಾಪ್ಟರ್‌ಗೆ ಕರೆದುಕೊಂಡು ಹೋಗುವುದನ್ನು ತೋರಿಸಿದೆ.
ವಿಮಾನ ಅಪಘಾತಗೊಂಡ ನಂತರ 13, ಒಂಬತ್ತು, ನಾಲ್ಕು ಮತ್ತು ಒಂದು ವರ್ಷ ವಯಸ್ಸಿನ ಮಕ್ಕಳು – ಮೇ 1 ರಿಂದ ದಟ್ಟ ಕಾಡಿನಲ್ಲಿ ದಿಕ್ಕು ಕಾಣದೆ ಅಲೆದಾಡುತ್ತಿದ್ದರು, ಅವರು ಪ್ರಯಾಣಿಸುತ್ತಿದ್ದ ಸೆಸ್ನಾ 206 ವಿಮಾನ ಅಪಘಾತಕ್ಕೀಡಾಗಿತ್ತು. ಸ್ಯಾನ್ ಜೋಸ್ ಡೆಲ್ ಗುವಿಯಾರ್ ಪಟ್ಟಣಕ್ಕೆ 350 ಕಿಲೋಮೀಟರ್ (217-ಮೈಲಿ) ಪ್ರಯಾಣದಲ್ಲಿ ಅರರಾಕುರಾ ಎಂದು ಕರೆಯಲ್ಪಡುವ ಕಾಡಿನ ಪ್ರದೇಶದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಪೈಲಟ್ ಎಂಜಿನ್ ಸಮಸ್ಯೆಗಳನ್ನು ವರದಿ ಮಾಡಿದ್ದರು. ಪೈಲಟ್, ಮಕ್ಕಳ ತಾಯಿ ಮತ್ತು ಸ್ಥಳೀಯ ನಾಯಕನ ದೇಹಗಳು ಅಪಘಾತದ ಸ್ಥಳದಲ್ಲಿ ಕಂಡುಬಂದಿವೆ, ಅಲ್ಲಿ ವಿಮಾನವು ಮರಗಳ ಮೇಲೆ ಬಹುತೇಕ ಲಂಬವಾಗಿ ಬಿದ್ದಿತ್ತು.

ಆದರೆ ಅದರಲ್ಲಿದ್ದ ನಾಲ್ವರು ಮಕ್ಕಳ ಮೃತದೇಹ ರಕ್ಷಣಾ ಸಿಬ್ಬಂದಿಗೆ ಸಿಕ್ಕಿರಲಿಲ್ಲ. ಹೀಗಾಗಿ 160 ಸೈನಿಕರು ಮತ್ತು ಕಾಡಿನ ಬಗ್ಗೆ ನಿಕಟ ಜ್ಞಾನ ಹೊಂದಿರುವ 70 ಸ್ಥಳೀಯರಿಂದ ಈ ಮಕ್ಕಳ ಹುಡುಕಾಟದ ಕಾರ್ಯಾಚರಣೆ ನಡೆಯಿತು ಹಾಗೂ ಇದು ಜಾಗತಿಕ ಗಮನ ಸೆಳೆಯುವಂತಾಯಿತು.
ಈ ಅಮೆಜಾನ್‌ ಮಳೆಕಾಡಿನ ದಟ್ಟ ಅರಣ್ಯ ಪ್ರದೇಶಗಳು ಜಾಗ್ವಾರ್‌ಗಳು, ಕಪ್ಪು ಚಿರತೆ, ಆನಕೊಂಡಾದಂತಹ ದೈತ್ಯ ಹಾವುಗಳು ಮತ್ತು ಇತರ ಮಾಂಸಹಾರಿ ಪ್ರಾಣಿಗಳಿಗೆ ನೆಲೆಯಾಗಿದೆ, ಜೊತೆಗೆ ಶಸ್ತ್ರಸಜ್ಜಿತ ಮಾದಕವಸ್ತು ಕಳ್ಳಸಾಗಣೆ ಗುಂಪುಗಳಿಗೆ ನೆಲೆಯಾಗಿರುವ ಈ ಕಾಡಿನಲ್ಲಿ ಮಕ್ಕಳು ಹೇಗೆ ಬದುಕುಳಿಯುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡಿತ್ತು. ಇಂಥ ಅಪಾಯಕಾರಿ ದಟ್ಟ ಕಾಡಿನಲ್ಲಿ ನಾಲ್ವರು ಮಕ್ಕಳಿಗಾಗಿ ಹುಡುಕುತ್ತಿರುವಾಗ ಶೋಧ ಆರಂಭವಾದ 17 ದಿನಗಳ ಬಳಿಕ ಸೇನೆಗೆ ಮಕ್ಕಳ ಬಗ್ಗೆ ಕೆಲವು ಕುರುಹುಗಳು ಸಿಕ್ಕಿದ್ದವು. ಮಕ್ಕಳ ಹೆಜ್ಜೆಗುರುತುಗಳು, ಅರ್ಧ-ತಿನ್ನಲಾದ ಹಣ್ಣುಗಳು ಅಧಿಕಾರಿಗಳು ತಮ್ಮ ಹುಡುಕಾಟ ಸರಿಯಾದ ಹಾದಿಯಲ್ಲಿ ಸಾಗಿದೆ ಎಂದು ನಂಬಲು ಕಾರಣವಾಯಿತು.

ಮಕ್ಕಳು ಅಲೆದಾಡುವುದನ್ನು ಮುಂದುವರೆಸುತ್ತಾರೆ ಮತ್ತು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತಾರೆ ಎಂದು ಚಿಂತಿತರಾದ ವಾಯುಪಡೆಯು ಸ್ಪ್ಯಾನಿಷ್ ಮತ್ತು ಮಕ್ಕಳ ಸ್ವಂತ ಸ್ಥಳೀಯ ಭಾಷೆಯಲ್ಲಿದ್ದ ಹಲವಾರು ಸೂಚನೆಗಳನ್ನು ಒಳಗೊಂಡ ಧ್ವನಿ ಸುರುಳಿಗಳನ್ನೊಳಗೊಂಡ 10,000 ಫ್ಲೈಯರ್‌ಗಳನ್ನು ಕಾಡಿಗೆ ಎಸೆದರು, ಅದರಲ್ಲಿ ಅವರಿಗೆ ಸ್ಥಳದಲ್ಲಿಯೇ ಇರಲು ಸೂಚಿಸಲಾಯಿತು. ಅಲ್ಲದೆ, ಸೇನೆಯು ಆಹಾರದ ಪೊಟ್ಟಣಗಳು ಮತ್ತು ನೀರಿನ ಬಾಟಲಿಗಳನ್ನು ಸಹ ಹೆಲಿಕಾಪ್ಟರಿನಿಂದ ಚೆಲ್ಲಿತು. ಅಲ್ಲದೆ ಮಕ್ಕಳ ಅಜ್ಜಿಯ ಧ್ವನಿ ಸುರುಳಿಯ ಸಂದೇಶವನ್ನು ಸಹ ಪ್ರಸಾರ ಮಾಡುತ್ತಿದ್ದರು ಹಾಗೂ ಮಕ್ಕಳಿಗೆ ಇದ್ದ ಸ್ಥಳದಿಂದ ಚಲಿಸದಂತೆ ಸೂಚಿಸುತ್ತಿದ್ದರು.
ಮಿಲಿಟರಿಯ ಪ್ರಕಾರ, ರಕ್ಷಕರು ಅಪಘಾತದ ಸ್ಥಳದಿಂದ ಪಶ್ಚಿಮಕ್ಕೆ ಐದು ಕಿಲೋಮೀಟರ್ (ಮೂರು ಮೈಲುಗಳು) ದೂರದಲ್ಲಿ ಮಕ್ಕಳನ್ನು ಪತ್ತೆ ಹಚ್ಚಿದರು. ಹುಯಿಟೊಟೊ ಮಕ್ಕಳು ಬೇಟೆ, ಮೀನುಗಾರಿಕೆ ಮತ್ತು ಸಂಗ್ರಹಣೆ ಬಗ್ಗೆ ಕಲಿಯುತ್ತಾರೆ ಮತ್ತು ಮಕ್ಕಳ ಅಜ್ಜ ಫಿಡೆನ್ಸಿಯೊ ವೇಲೆನ್ಸಿಯಾ ಅವರು ಮಕ್ಕಳಿಗೆ ಕಾಡಿನ ಬಗ್ಗೆ ಚೆನ್ನಾಗಿ ತಿಳಿದಿತ್ತು ಎಂದು ಸುದ್ದಿಸಂಸ್ಥೆ ಎಎಫ್‌ಪಿಗೆ ಹೇಳಿದ್ದಾರೆ.

ಹುಡುಕಾಟದಲ್ಲಿದ್ದ ಸ್ಥಳೀಯ ಸಮುದಾಯಗಳು ಮತ್ತು ಮಿಲಿಟರಿ ಪಡೆಗಳು 40 ದಿನಗಳ ನಂತರ ಮಕ್ಕಳನ್ನು ಪತ್ತೆ ಮಾಡಿದರು. ಹುಡುಕಾಟದಲ್ಲಿ ಪಾಲ್ಗೊಂಡಿದ್ದ ಅರರಾಕುರಾ ಮೂಲದವರಿಂದ ಮಕ್ಕಳು ಪತ್ತೆಯಾಗಿದ್ದಾರೆ ಎಂದು ವೆಲೆನ್ಸಿಯಾ ಅವರು ತಿಳಿಸಿದ್ದಾರೆ.
ರಕ್ಷಣಾ ಸಚಿವ ಇವಾನ್ ವೆಲಾಸ್ಕ್ವೆಜ್ ಅವರು ವಿವಿಧ ಸೇನಾ ಘಟಕಗಳ “ಅಚಲ ಮತ್ತು ದಣಿವರಿಯದ” ಕೆಲಸಕ್ಕೆ ಪ್ರಶಂಸಿಸಿದರು. ಸಲ್ಲಿಸಿದರು, ಜೊತೆಗೆ ಹುಡುಕಾಟದಲ್ಲಿ ಭಾಗವಹಿಸಿದ ಸ್ಥಳೀಯರಿಗೂ ಧನ್ಯವಾದ ಹೇಳಿದರು.
ಕಷ್ಟದ ಪರಿಸ್ಥಿತಿಯಲ್ಲೂ ಬದುಕುಳಿಯುವ ಮಾರ್ಗವನ್ನು ಕಂಡು ಹಿಡಿದ ಮಕ್ಕಳ ಧೈರ್ಯವನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ’ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ.

3.6 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement