ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ : ಹೆತ್ತವರ ಶವದ ಜೊತೆ ಆಹಾರವಿಲ್ಲದೆ 3 ದಿನ ಕಳೆದರೂ ಬದುಕಿತ್ತು 6 ದಿನದ ಹಸುಳೆ….!

ಹಾಲುಗಲ್ಲದ ಕಂದ. ಜಗತ್ತನ್ನ ಕಂಡು ಇನ್ನೂ ಒಂದು ವಾರ ಕೂಡ ತುಂಬಿರಲಿಲ್ಲ. ಜನಿಸಿದ ಮೂರೇ ದಿನಕ್ಕೆ ಉಸಿರನ್ನೇ ನಿಲ್ಲಿಸುವಂಥ ಹಸಿವು ಕಾಡಿತ್ತು. ಅಮ್ಮನ ಎದೆಹಾಲಿಗಾಗಿ ಮಲಗಿದ್ದಲ್ಲೇ ಚೀರುತ್ತಿತ್ತು. ಆದರೆ ಹೆತ್ತವಳಿಗೆ ಕಂದನ ಅಳು ಕೇಳುತ್ತಿರಲಿಲ್ಲ. ಅಪ್ಪನಿಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಪುಟಾಣಿಯ ಪಕ್ಕದಲ್ಲೇ ಹೆತ್ತವರು ಸಾವಿನ ಮನೆ ಸೇರಿದ್ದರು…!
ಗಂಡ ಹೆಂಡತಿ ಸಾವಿನ ಮನೆ ಸೇರಿದ್ದರೆ ಹೆತ್ತವರ ಶವದ ಪಕ್ಕದಲ್ಲಿಯೇ ಈ 6 ದಿನಗಳ ಮಗು ಅನಾಥವಾಗಿತ್ತು. ಆದರೆ ಮೂರು ದಿನಗಳ ಕಾಲ ಏನೂ ಇಲ್ಲದೆ ಬದುಕಿತ್ತು…! ಈ ದಾರುಣ ಘಟನೆ ನಡೆದಿರುವುದು ಉತ್ತರಾಖಂಡ ರಾಜ್ಯದ ರಾಜಧಾನಿ ಡೆಹ್ರಾಡೂನ್‌ನಲ್ಲಿ. ಮೃತರನ್ನು ಉತ್ತರ ಪ್ರದೇಶದ ಸಹರನ್‌ಪುರದ ನಿವಾಸಿ ಕಾಶಿಫ್‌ ಎಂದು ಗುರುತಿಸಲಾಗಿದೆ. ಈತನ ಪತ್ನಿ ಆನಮ್, ಈಕೆ ಕೂಡ ಗಂಡನ ಜೊತೆ ಮೃತಪಟ್ಟಿದ್ದಾಳೆ. ಕೇವಲ 4 ತಿಂಗಳ ಹಿಂದಷ್ಟೇ ಈ ದಂಪತಿ ಉತ್ತರಾಖಂಡ ರಾಜ್ಯದ ರಾಜಧಾನಿ ಡೆಹ್ರಾಡೂನ್‌ಗೆ ಬಂದಿದ್ದರು. ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈಕೆ ಜೂನ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.
ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಕನಿಷ್ಠ 3 ದಿನಗಳ ಹಿಂದೆಯೇ ಗಂಡ ಹೆಂಡತಿ ಇಬ್ಬರೂ ಮೃತಪಟ್ಟಿದ್ದು, ಕೇವಲ 6 ದಿನಗಳ ಹಿಂದಷ್ಟೇ ಜನಿಸಿದ್ದ ನವಜಾತ ಶಿಶು ಮೂರು ದಿನಗಳ ಕಾಲ ಆಹಾರ ನೀರು ಇಲ್ಲದೆ ತಂದೆ – ತಾಯಿಗಳ ಶವದ ಪಕ್ಕದಲ್ಲಿಯೇ ಇದ್ದು ಪವಾಡಸದೃಶವಾಗಿ ಬದುಕುಳಿದಿದೆ…!
ದಂಪತಿ ವಾಸವಿದ್ದ ಮನೆಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತಿತ್ತು. ಹೀಗಾಗಿ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ದಂಪತಿ ಸಾವಿನ ವಿಷಯ ಬೆಳಕಿಗೆ ಬಂದಿದೆ. ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶವಗಳ ಪಕ್ಕದಲ್ಲೇ 6 ದಿನಗಳ ಹಸುಗೂಸು ಸಹ ಕಂಡುಬಂದಿದೆ. ಕೂಡಲೇ ಪೊಲೀಸರು ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಶುವಿನ ಆರೋಗ್ಯ ಪರಿಶೀಲಿಸಿದ ವೈದ್ಯರು, ಮಗು ಆರೋಗ್ಯವಂತವಾಗಿದ್ದು, ಕೇವಲ ನಿರ್ಜಲೀಕರಣಕ್ಕೆ ತುತ್ತಾಗಿದೆ ಎಂದು ತಿಳಿಸಿದ್ದಾರೆ. ಮೃತ ದಂಪತಿಯ ಮಗುವಿನ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿರುವ ವೈದ್ಯರು, ಆಸ್ಪತ್ರೆಗೆ ಶಿಶುವನ್ನು ಕರೆತಂದಾಗ ಅದು ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿತ್ತು. ಕೂಡಲೇ ನಾವು ಮಗುವಿಗೆ ದ್ರವ ಪದಾರ್ಥಗಳನ್ನು ನೀಡಿದೆವು. ಇದೀಗ ಮಗುವನ್ನು ಐಸಿಯುನಲ್ಲಿ ಇರಿಸಿ ನಿಗಾ ವಹಿಸಲಾಗಿದೆ. ಮಗು ಆರೋಗ್ಯವಂತವಾಗಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಯೂ ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ದಂಪತಿ ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ. ಆದರೆ, ಇವರು ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿ ಕ್ರೇನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ಪತ್ನಿ ಗೃಹಿಣಿಯಾಗಿದ್ದಳು.
ಮೃತ ದಂಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಪೊಲೀಸರು ಮೃತರ ತವರು ರಾಜ್ಯವಾದ ಉತ್ತರ ಪ್ರದೇಶ ರಾಜ್ಯಕ್ಕೆ ತೆರಳಿ ತನಿಖೆ ಮುಂದುವರೆಸಲು ನಿರ್ಧರಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement