ಪ್ರಮುಖ ವಿಪಕ್ಷಗಳ ಒಗ್ಗಟ್ಟಿನ ಸಭೆಗೆ ಮೊದಲು ಕಾಂಗ್ರೆಸ್ ಜೊತೆ ಮೈತ್ರಿಗೆ ಕೆಲ ಪ್ರಾದೇಶಿಕ ಪಕ್ಷಗಳ ಭಿನ್ನಾಭಿಪ್ರಾಯ

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಒಗ್ಗೂಡಿಸುವಿಕೆಯ ಸಭೆ ಕರೆದ ಕೆಲವೇ ದಿನಗಳ ಮೊದಲು, ಅನೇಕ ಪ್ರಾದೇಶಿಕ ಸಂಘಟನೆಗಳು ಕಾಂಗ್ರೆಸ್ ಅನ್ನು ಒಳಗೊಂಡಿರುವ ಮೈತ್ರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದು 2024 ರ ಲೋಕಸಭೆ ಚುನಾವಣೆಗಳು ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯೇತರ ಪಕ್ಷಗಳನ್ನು ಒಂದುಗೂಡಿಸಿ ‘ಮಹಾಮೈತ್ರಿ’ ರಚನೆಯ ನೇತೃತ್ವವಹಿಸಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಇದೇ 23ಕ್ಕೆ ಪಾಟ್ನಾದಲ್ಲಿ ಸಭೆ ಕರೆದಿದ್ದಾರೆ. ಸಭೆಗೆ ಮೂರು ದಿನ ಮಾತ್ರ ಉಳಿದಿದೆ. ಈ ನಡುವೆ ಪ್ರತಿಪಕ್ಷಗಳ ರಾಜಕೀಯ ತಂತ್ರಗಾರಿಕೆ ಬದಲಾಗಿದೆ.
ಪ್ರತಿಪಕ್ಷಗಳು ಒಗ್ಗಟ್ಟಾದರೆ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಬಹುದು ಎಂಬುದು ಪ್ರಾದೇಶಿಕ ಪಕ್ಷಗಳು ಹೇಳಿವೆ. ಆದರೆ, ಸಭೆಗೂ ಮೊದಲೇ ಪ್ರಾದೇಶಿಕ ಪಕ್ಷಗಳು ಮುಂದಿಟ್ಟಿರುವ ಬೇಡಿಕೆ ಪ್ರತಿಪಕ್ಷಗಳ ಒಗ್ಗಟ್ಟಿಗೆ ಅಡ್ಡಿಯಾಗುವ ಅಪಾಯವಿದೆ ಹಾಗೂ ಕಾಂಗ್ರೆಸ್‌ಗೆ ಮುಳುವಾಗುವ ಅಪಾಯವೂ ಇದೆ ಎನ್ನಲಾಗಿದೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಸ್ಪರ್ಧೆ ಮಾಡಬಾರದು. ನಮ್ಮ ಷರತ್ತಿಗೆ ಒಪ್ಪಿದಲ್ಲಿ ನಾವು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯದೇ ಕಾಂಗ್ರೆಸ್‌ ಜೊತೆ ಮೈತ್ರಿ ಸೂತ್ರಕ್ಕೆ ಮುಂದಾಗುತ್ತೇವೆ ಎಂದು ಆಮ್‌ ಆದ್ಮಿ ಪಕ್ಷ ಹೇಳಿದೆ. ದೆಹಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕುರಿತಂತೆ ಕೇಂದ್ರದ ಸುಗ್ರೀವಾಜ್ಞೆ ಸೋಲಿಸಲು ಕೇಜ್ರಿವಾಲ್ ಕಾಂಗ್ರೆಸ್‌ ಬೆಂಬಲ ಕೋರಿದ್ದರು. ಆದರೆ ಅವರ ಕರೆಗೆ ಕಾಂಗ್ರೆಸ್ ಇನ್ನೂ ಸ್ಪಂದಿಸಿಲ್ಲ. ಆಮ್ ಆದ್ಮಿ ಪಕ್ಷವು ತಾನು ಆಡಳಿತ ನಡೆಸುತ್ತಿರುವ ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಇದಲ್ಲದೆ, ಎಎಪಿ ನಾಯಕರು ಗುಜರಾತ್‌ನಲ್ಲಿ ಲೋಕಸಭಾ ಸ್ಥಾನಗಳಿಗೆ ಹಕ್ಕು ಸಾಧಿಸುವುದಾಗಿ ಹೇಳಿದ್ದಾರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 27% ಮತ ಪಡೆದರೆ ಅಲ್ಲಿ ಪಕ್ಷವು 13% ಮತಗಳನ್ನು ಗಳಿಸಿದೆ.

ಇಂದಿನ ಪ್ರಮುಖ ಸುದ್ದಿ :-   ಆಸ್ಟ್ರೇಲಿಯಾ ವಿರುದ್ಧ ಗೆಲುವು ; ಪಾಕಿಸ್ತಾನ ಹೊರದಬ್ಬಿ ವಿಶ್ವದ ನಂ.1 ತಂಡವಾದ ಭಾರತ; ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲೂ ಅಗ್ರಸ್ಥಾನ ಪಡೆದ ಏಷ್ಯಾದ ಮೊದಲ ತಂಡ ಭಾರತ

ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಜತೆ ಮೈತ್ರಿ ತೊರೆದರೆ ಮಾತ್ರ ಕಾಂಗ್ರೆಸ್‌ ಜತೆ ರಾಷ್ಟ್ರಮಟ್ಟದಲ್ಲಿ ಪಕ್ಷವು ಜೈ ಜೋಡಿಸಬಹುದು ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ತೆಲಂಗಾಣದ ಬಿಆರ್‌ಎಸ್‌ ಸಹ ಕಾಂಗ್ರೆಸ್‌ ಜತೆ ಚುನಾವಣಾ ಪೂರ್ವ ಹೊಂದಾಣಿಕೆಗೆ ನಿರಾಕರಿಸಿದ್ದು ಇವು ‘ಮಹಾಮೈತ್ರಿ’ ರಚನೆಯ ಪ್ರಯತ್ನಕ್ಕೆ ಆರಂಭಿಕ ಅಡ್ಡಿ ಎಂದೇ ಹೇಳಲಾಗುತ್ತಿದೆ.
ಮತ್ತೊಂದಡೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ್ ಹೊಸ ಮೈತ್ರಿ ಸೂತ್ರ ಮುಂದಿಟ್ಟಿದ್ದಾರೆ. ಜೂನ್ 23ರ ಸಭೆಗೆ ಹಾಜರಾಗುವುದನ್ನು ಖಚಿತಪಡಿಸಿರುವ ಯಾದವ್, ವಿರೋಧ ಪಕ್ಷದ ಸಭೆಯಲ್ಲಿ ಈ ಗೆಲುವಿನ ಸೂತ್ರದ ಬಗ್ಗೆ ಒತ್ತಿ ಹೇಳುವುದಾಗಿ ಹೇಳಿದ್ದಾರೆ. “ಒಂದು ನಿರ್ದಿಷ್ಟ ರಾಜ್ಯದಲ್ಲಿ ಪ್ರಬಲವಾಗಿರುವ ಮೈತ್ರಿ ಪಾಲುದಾರ ಪಕ್ಷವನ್ನು ಇತರ ಪ್ರತಿಪಕ್ಷಗಳು ಬೆಂಬಲಿಸಬೇಕು” ಎಂದು ಯಾದವ್ ಹೇಳಿದ್ದಾರೆ. “ಯಾರು ಆ ರಾಜ್ಯದಲ್ಲಿ ಪ್ರಬಲರಾಗಿದ್ದಾರೆ, ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಆ ನಿರ್ದಿಷ್ಟ ರಾಜ್ಯದಲ್ಲಿ ಅವರು ಬಿಜೆಪಿಯನ್ನು ಸೋಲಿಸುವ ಸ್ಥಾನದಲ್ಲಿದ್ದರೆ ಆ ನಿರ್ದಿಷ್ಟ ರಾಜ್ಯದಲ್ಲಿನ ಎಲ್ಲ ಪ್ರತಿಪಕ್ಷಗಳು ಆ ಪಕ್ಷಕ್ಕೆ ಬೆಂಬಲಿಸಬೇಕು ಎಂಬ ಸೂತ್ರವನ್ನು ಅವರು ಮುಂದಿಟ್ಟಿದ್ದಾರೆ.
“ಜೂನ್ 23 ರ ಸಭೆ ನಡೆಯಲಿ, ಆಗ ಚಿತ್ರಣವು ಸ್ಪಷ್ಟವಾಗಬಹುದು. ರಾಜಕೀಯದಲ್ಲಿ ಯಾವುದೂ ಅಂತಿಮವಲ್ಲ. ವಿಷಯಗಳು ಬದಲಾಗುತ್ತವೆ ಎಂದು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ ಹೇಳಿದ್ದಾರೆ.

ಕಾಂಗ್ರೆಸ್ ಉಪಸ್ಥಿತಿಯ ಬಗ್ಗೆ ಅಸಮಾಧಾನ ಇರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯು ಜೂನ್ 23 ರಂದು ನಡೆಯಲಿರುವ ಸಭೆಗೆ ಹಾಜರಾಗುವ ಸಾಧ್ಯತೆಯಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವ ತನ್ನ ನಿಲುವನ್ನು ಅದು ಪುನರುಚ್ಚರಿಸಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ತನ್ನ ಪ್ರಮುಖ ಎದುರಾಳಿ ಪಕ್ಷವನ್ನಾಗಿ ಕಾಂಗ್ರೆಸ್ ಅನ್ನು ನೋಡುತ್ತಿದೆ.
ಬಿಜೆಪಿ ಸೋಲಿಸಲು ಪ್ರಾದೇಶಿಕ ಪಕ್ಷಗಳು ‘ಮಹಾಮೈತ್ರಿ’ಯ ಭಾಗವಾಗಲು ಕಾಂಗ್ರೆಸ್‌ ಸ್ವಲ್ಪ ಉದಾರತೆ ತೋರಬೇಕು. ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್‌, ತೆಲಂಗಾಣವನ್ನು ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡಬೇಕು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಿಂದ ನಾವು ಹಿಂದೆ ಸರಿಯುತ್ತೇವೆ ಎಂಬ ಬೇಡಿಕೆಯನ್ನು ಆಪ್‌, ಎಸ್‌ಪಿ, ಟಿಎಂಸಿ, ಬಿಆರ್‌ಎಸ್‌ ಮುಂದಿಡಲು ನಿರ್ಧರಿಸಿವೆ.
ಮತ್ತೊಂದು ಕಡೆ ಕರ್ನಾಟಕ ಚುನಾವಣೆ ಗೆದ್ದ ಮೇಲೆ ಕಾಂಗ್ರೆಸ್‌ ಪಕ್ಷ ಹೊಸ ಉತ್ಸಾಹದಲ್ಲಿದೆ. ವರ್ಷಾಂತ್ಯಕ್ಕೆ ನಡೆಯುವ ಐದು ರಾಜ್ಯಗಳ ಚುನಾವಣೆಯತ್ತ ಚಿತ್ತ ಹರಿಸಿದ್ದು, ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಮಹಾಮೈತ್ರಿ ಭಾಗವಾಗುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಕೈಗೊಳ್ಳಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಹೀಗಾಗಿ ಜೂನ್ 23ರ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸದೆ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಮತ್ತೆ ಡಿಲಿಮಿಟೇಶನ್ ಚರ್ಚೆ : ದಕ್ಷಿಣ ರಾಜ್ಯಗಳು ಡಿಲಿಮಿಟೇಶನ್ ವಿರೋಧಿಸುತ್ತಿರುವುದು ಏಕೆ...?

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement