ಕಳೆದ ವಾರ ಭಾರತದ ಉತ್ತರ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ ಬಿಪೋರ್ ಜಾಯ್ ಚಂಡಮಾರುತವು ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಿದೆ. ಆದರೆ ಇದೇವೇಳೆ ಕರ್ನಾಟಕದಂತಹ ರಾಜ್ಯಗಳಿಗೆ ಬರಬೇಕಿದ್ದ ಮಾನ್ಸೂನ್ ಮಳೆಯನ್ನು ಕಸಿದುಕೊಂಡು ಹೋಗಿದೆ ಹಾಗೂ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯ ಕೊರತೆ ಉಂಟುಮಾಡಿದೆ. ಅಲ್ಲದೆ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಶಾಖದ ಅಲೆಗಳಿಗೂ ಕಾರಣವಾಗಿದೆ.
ಇತ್ತೀಚಿನ ದಶಕಗಳಲ್ಲಿ ಅರೇಬಿಯನ್ ಸಮುದ್ರದಲ್ಲಿ ಸಮುದ್ರದ ಮೇಲ್ಮೈನಲ್ಲಿ ಹೆಚ್ಚಿನ ತಾಪಮಾನವು ಕಂಡುಬಂದಿದೆ ಎಂದು ಅಧ್ಯಯನಗಳು ಈಗಾಗಲೇ ತೋರಿಸಿವೆ ಮತ್ತು ಇವುಗಳು ಚಂಡಮಾರುತದ ತೀವ್ರತೆ, ಆವರ್ತನ ಮತ್ತು ಅವಧಿಯ ಹೆಚ್ಚಳಕ್ಕೆ ಕಾರಣಗಳು ಎಂದು ಹೇಳಲಾಗುತ್ತಿದೆ.
ಚಂಡಮಾರುತ ಬಿಪೋರ್ ಜಾಯ್ ಅದರ ಹೆಸರಿಗೆ ತಕ್ಕಂತೆ ನಿಜವಾಗಿದೆ (‘ಬಿಪೋರ್ ಜಾಯ್’ ಎಂದರೆ ಬಾಂಗ್ಲಾದಲ್ಲಿ ಬಂಗಾಳಿ ಭಾಷೆಯಲ್ಲಿ ವಿಪತ್ತು ಎಂದು ಅನುವಾದಿಸಲಾಗುತ್ತದೆ), ಅನೇಕ ವಿಧಗಳಲ್ಲಿ ವಿಪತ್ತು ಆಗಿದೆ.
ತೀವ್ರ ಚಂಡಮಾರುತವಾಗಿ ಗುಜರಾತ್‌ನ ಕರಾವಳಿಯನ್ನು ಅಪ್ಪಳಿಸಿ ನಂತರ ದುರ್ಬಲಗೊಂಡ ಬಿಪೋರ್ ಜೋಯ್, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅತಿವೇಗದ ಗಾಳಿ ಮತ್ತು ಅತ್ಯಂತ ಭಾರೀ ಮಳೆಗೆ ಕಾರಣವಾಯಿತು, ಇದು ಈ ರಾಜ್ಯಗಳಲ್ಲಿ ಹೆಚ್ಚುವರಿ ಮಳೆ ಮತ್ತು ಅಕಾಲಿಕ ಮಳೆಗೆ ಕಾರಣವಾಯಿತು. IMD ಪ್ರಕಾರ, ಜೂನ್ 1 ರಿಂದ ರಾಜಸ್ಥಾನದಲ್ಲಿ 320% ರಷ್ಟು ಹೆಚ್ಚಿನ ಮಳೆ ದಾಖಲಾಗಿದ್ದರೆ, ಗುಜರಾತ್‌ನಲ್ಲಿ 166%ರಷ್ಟು ಹೆಚ್ಚಿನ ಮಳೆಯಾಗಿದೆ.
ಆದರೆ ಇದೇ ವೇಳೆ ಬಿಪೋರ್ ಜಾಯ್ ಹಲವಾರು ರಾಜ್ಯಗಳಲ್ಲಿ ಮುಂಗಾರು ಮಳೆಯ ವಿಳಂಬಕ್ಕೆ ಕಾರಣವಾಗಿದೆ. IMD ಪ್ರಕಾರ ಕರ್ನಾಟಕದಲ್ಲಿ ಜೂನ್ 1ರಿಂದ ಈವರೆಗೆ ಶೇ.71ರಷ್ಟು ಮಳೆ ಕೊರತೆಯಾಗಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 80% ಕ್ಕಿಂತ ಹೆಚ್ಚು ಮಳೆ ಕೊರತೆಗೆ ಕಾರಣವಾಗಿದೆ.
ಕರ್ನಾಟಕದ ಮೇಲೆ ನೈಋತ್ಯ ಮುಂಗಾರು ಮಳೆಯ ಪ್ರಗತಿಯ ಮೇಲೆ ಬಿಪೋರ್ ಜಾಯ್ ಪರಿಣಾಮ ಬೀರಿದೆ ಎಂದು IMD ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಐಎಂಡಿ-ಬೆಂಗಳೂರಿನ ನಿರ್ದೇಶಕರು ಬಿಪೋರ್ ಜಾಯ್ ಚಂಡಮಾರುತ ಮುಂಗಾರಿನ ಗಾಳಿಯ ಪ್ರಸರಣದ ಮಾದರಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮುಂಗಾರು ಪ್ರಗತಿಗೆ ಅನುಕೂಲಕರ ಪರಿಸ್ಥಿತಿಗಳು ಬರಲಿವೆ ಎಂದು ಹೇಳಿದ್ದಾರೆ.
ಇದೇ ವೇಳೆ, ಉತ್ತರದ ಅನೇಕ ರಾಜ್ಯಗಳು ಶಾಖದ ಅಲೆಯಿಂದ ತತ್ತರಿಸುತ್ತಿವೆ. ಜೂನ್ 19 ರಂದು ನೀಡಲಾದ ತನ್ನ ಎಚ್ಚರಿಕೆಯಲ್ಲಿ, IMD ಹಿಂದಿನ ದಿನ, ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಹಲವು ಭಾಗಗಳಲ್ಲಿ ಮತ್ತು ದಕ್ಷಿಣ ಬಿಹಾರದ ಕೆಲವು ಭಾಗಗಳಲ್ಲಿ ” ತೀವ್ರ ಶಾಖದ ಅಲೆ” ಪರಿಸ್ಥಿತಿಗಳು ಚಾಲ್ತಿಯಲ್ಲಿರಲಿವೆ ಎಂದು ಹೇಳಿದೆ. ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ತೆಲಂಗಾಣದ ಕೆಲವು ಭಾಗಗಳು, ವಿದರ್ಭದ ಕೆಲವು ಭಾಗಗಳು ಮತ್ತು ಪೂರ್ವ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖದ ಅಲೆಗಳು ಸಂಭವಿಸಿವೆ ಎಂದು IMD ತಿಳಿಸಿದೆ. ಅಲ್ಲದೆ, ಪೂರ್ವ ಭಾರತ ಮತ್ತು ಪಕ್ಕದ ಪ್ರದೇಶಗಳಲ್ಲಿ ಜೂನ್ 20 ರಿಂದ “ಕ್ರಮೇಣ ಕಡಿಮೆಯಾಗುವ” ಸಾಧ್ಯತೆಯಿದೆ ಎಂದು ಹೇಳಿದೆ.
ಬಿಪೋರ್ ಜಾಯ್ ಆಗಮನ, ಮಾನ್ಸೂನ್ ಮಳೆ ಕೊರತೆ ಮತ್ತು ಶಾಖದ ಅಲೆಗಳು ಎಲ್ಲವೂ ಸಂಬಂಧ ಹೊಂದಿವೆ ಎಂದು ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿಯ ಹವಾಮಾನ ವಿಜ್ಞಾನಿ ರಾಕ್ಸಿ ಕೋಲ್ ಮ್ಯಾಥ್ಯೂ ದಿ ವೈರ್‌ಗೆ ತಿಳಿಸಿದ್ದಾರೆ. ದಕ್ಷಿಣ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮುಂಗಾರು ಮಳೆಗೆ ಕಾರಣವಾಗಬೇಕಿದ್ದ ಸಾಕಷ್ಟು ತೇವಾಂಶವನ್ನು ಚಂಡಮಾರುತವು ತೆಗೆದುಕೊಂಡು ಹೋಗಿದೆ. ಹಗಲಿನ ಸಮಯದಲ್ಲಿ ಮೋಡರಹಿತ ಆಕಾಶವು ಸೌರ ವಿಕಿರಣದ ಪ್ರಮಾಣ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಅಧ್ಯಯನಗಳು ಅರೇಬಿಯನ್ ಸಮುದ್ರದ ಮೇಲಿನ ಸಮುದ್ರದ ಮೇಲ್ಮೈ ತಾಪಮಾನವು ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇತ್ತೀಚಿನ ದಶಕಗಳಲ್ಲಿ 1.2 ° C ನಿಂದ 1.4 ° C ಗೆ ಹೆಚ್ಚಾಗಿದೆ. ಬೆಚ್ಚಗಿನ ಸಮುದ್ರಗಳು ಚಂಡಮಾರುತದ ತೀವ್ರತೆ, ಆವರ್ತನ ಮತ್ತು ಅವಧಿಯ ಹೆಚ್ಚಳಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ. ಇತ್ತೀಚಿನ ಎರಡು ಅಧ್ಯಯನಗಳು ಹವಾಮಾನ ಬದಲಾವಣೆಯು ಹಿಂದೂ ಮಹಾಸಾಗರದ ಡೈನಾಮಿಕ್ಸ್ ಅನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ತೋರಿಸಿದೆ. ಹಿಂದೂ ಮಹಾಸಾಗರದಲ್ಲಿನ ಶಾಖದ ಅಲೆಗಳು ಮಧ್ಯ ಭಾರತದ ಮೇಲೆ ಮಾನ್ಸೂನ್ ಮಳೆಯನ್ನು ಕಡಿಮೆ ಮಾಡುತ್ತಿವೆ, ಆದರೆ ಸಮುದ್ರದ ಉತ್ತರ ಭಾಗಗಳ ತೀವ್ರ ತಾಪಮಾನವು ಚಂಡಮಾರುತಗಳನ್ನು ತೀವ್ರಗೊಳಿಸುತ್ತಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ