ಬೆಂಗಳೂರು: ಗೃಹಿಣಿಯರಿಗೆ 2 ಸಾವಿರ ರೂ. ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ಸದ್ಯಕ್ಕೆ ತಡೆ ಹಿಡಿದಿದ್ದೇನೆ. ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ್ ಸಮಸ್ಯೆ ನೋಡುತ್ತಿದ್ದೀರಿ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಆಲ್ ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೆಲವರು 200-300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಿಗೆ ರದ್ದಾಗುತ್ತದೆ ಹಾಗೂ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ. ಈ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಲು ಹೋಗುವವರು ಲಂಚ ಕೇಳಿದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಭಿಪ್ರಾಯ ಆಲಿಸುವೆ
ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆದರೆ ಅದು ಜಾರಿಯಾಗಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆಯಲಿದ್ದೇನೆ. ಕುಮಾರಣ್ಣ ಅವರು ಮಾತನಾಡಲಿ, ನಾನು ಅವರ ಸಲಹೆ ಪಡೆಯುತ್ತೇನೆ. ನಾನು ಈ ಹಿಂದೆ ಜಗದೀಶ್ ಶೆಟ್ಟರ, ದೇವೇಗೌಡರು, ಎಸ್.ಎಂಕೃಷ್ಣ, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡುತ್ತೇನೆ. ಎಲ್ಲರ ಅನುಭವದ ಸಲಹೆ ಪಡೆಯುತ್ತೇನೆ. ಇದರಲ್ಲಿ ರಾಜಕಾರಣ ಯಾಕೆ? ಎಂದು ಪ್ರಶ್ನಿಸಿದರು.
ನಾವು ಏರಿಕೆ ಮಾಡಿಲ್ಲ…
ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟದ ಬಗ್ಗೆ ಕೇಳಿದಾಗ, ‘ನಾವು ಎಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದೇವೆ? ಹಿಂದಿನ ಸರ್ಕಾರ ಇದ್ದಾಗ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನವೇ ಅವರು ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್ ದರ ಪರಿಷ್ಕರಣ ಸಮಿತಿ ಬೆಲೆ ನಿಗದಿಯಲ್ಲಿ ಸ್ವಂತ ಅಧಿಕಾರ ಹೊಂದಿದೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ