ಪ್ಲಾಸ್ಟಿಕ್ ಡಬ್ಬ ನುಂಗಿ ಹೆಣಗಾಡಿದ ನಾಗರಹಾವು : ಶಸ್ತ್ರಚಿಕಿತ್ಸೆ ನಡೆಸಿ ಡಬ್ಬ ಹೊರತೆಗೆದ ವೈದ್ಯರು; ಕಾಡಿಗೆ ಮರಳಿದ ಹಾವು

ಮಂಗಳೂರು: ಸುಣ್ಣದ ಪ್ಲಾಸ್ಟಿಕ್ ಡಬ್ಬವೊಂದನ್ನು ನುಂಗಿ ಸಂಕಟಪಡುತ್ತಿದ್ದ ನಾಗರಹಾವಿಗೆ ಮಂಗಳೂರಿನ ಯುವ ವೈದ್ಯರೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹಾವನ್ನು ರಕ್ಷಣೆ ಮಾಡಿದ್ದಾರೆ.
ಬಂಟ್ವಾಳದ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿ ಇದ್ದ ಬಿಲವೊಂದರಲ್ಲಿ ಸಿಲುಕಿ ಈ ನಾಗರಹಾವು ಹೊರಬರಲು ಹೆಣಗಾಡುತ್ತಿತ್ತು. ಮೂರುದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ವಗ್ಗದ ಉರಗತಜ್ಞ ಸ್ನೇಕ್ ಕಿರಣ ಎಂಬವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹಾವನ್ನು ಬಿಲದಿಂದ ಹೊರ ತೆಗೆದಿದ್ದಾರೆ. ಈ ವೇಳೆ ಅದರ ತಲೆಯ ಕೆಳಭಾಗದಲ್ಲಿ ಎರಡು ಗಾಯಗಳಾಗಿರುವುದು ಕಂಡುಬಂದಿದೆ. ನಂತರ ಅದನ್ನು ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ ನಾರಾವಿ ಅವರಲ್ಲಿಗೆ ತರಲಾಯಿತು.

ಗಾಯಕ್ಕೆ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಉಬ್ಬಿರುವುದನ್ನು ಗಮನಿಸಿ ಎಕ್ಸ್ ರೇ ಮಾಡಿದ್ದಾರೆ. ಆಗ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುವಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ನಂತರ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಹೊರತೆಗೆದಿದ್ದಾರೆ. ಡಾ.ಯಶಸ್ವಿಯವರ ಪ್ರಕಾರ ‘ಸುಮಾರು ಐದು ಅಡಿ ಉದ್ದದ ಹೆಣ್ಣು ನಾಗರಹಾವು ಇದಾಗಿತ್ತು. 10 ವರ್ಷ ಪ್ರಾಯವಾಗಿರಬಹುದು. ಶಸ್ತ್ರ ಚಿಕಿತ್ಸೆ ಬಳಿಕ ಅದಕ್ಕೆ ಆ್ಯಂಟಿ ಬಯೋಟಿಕ್ ನೀಡಿ, ಆ್ಯಂಟಿ ಸೆಪ್ಟಿಕ್ ಹಾಕಿ ಚಿಕಿತ್ಸೆ ನೀಡಲಾಗಿದೆ. ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ನೀಡಿದ ನಂತರ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ಸ್ನೇಕ್ ಕಿರಣ ಅವರು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಮತ್ತೆ ಹಾವನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ವಿದ್ಯುತ್‌ ಉತ್ಪಾದನೆ ಸಾಮರ್ಥ್ಯಕ್ಕಿಂತ ಕಡಿಮೆಯಾಗಿದ್ದು ಏಕೆ? : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement