ನ್ಯೂಯಾರ್ಕ್: ಶತಮಾನದ ಹಿಂದೆ ದುರಂತಕ್ಕೀಡಾದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿದೆ
ಟೈಟಾನ್ ಹೆಸರಿನ ನೌಕೆಯು ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸಮುದ್ರದ ಆಳಕ್ಕೆ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಗುರುವಾರ ರಿಮೋಟ್ ಕಂಟ್ರೋಲ್ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಅಮೆರಿಕ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.
ನಾಪತ್ತೆಯಾದ ಟೈಟಾನ್ ನೌಕೆಯಲ್ಲಿ ಬ್ರಿಟನ್‌ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್ ಹರ್ಡಿಂಗ್ (58), ಫ್ರೆಂಚ್ ಕಡಲ ತಜ್ಞ ಪೌಲ್ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್ (48) ಮತ್ತು ಆತನ ಪುತ್ರ ಸುಲೇಮಾನ್ ದಾವೂದ್ (19) ಇದ್ದರು.
ಈ ಬಗ್ಗೆ ಅಮೆರಿಕ ರೀರ್ ಅಡ್ಮಿರಲ್ ಜಾನ್ ಮೌಗರ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಅಮೆರಿಕ ಕರಾವಳಿ ಪಡೆ ಮತ್ತು ಇಡೀ ಕಾರ್ಯಾಚರಣೆಯ ತಂಡದ ಪರವಾಗಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತಪಟ್ಟಿರುವ ಸುದ್ದಿಯನ್ನು ಈಗಾಗಲೇ ಅವರ ಕುಟುಂಬಗಳಿಗೆ ತಿಳಿಸಿರುವುದಾಗಿ ಹೇಳಿದರು.
ಕಳೆದ ಭಾನುವಾರ (ಜೂನ್ 18) ಟೈಟಾನಿಕ್ ಹಡಗು ಇರುವ ಕಡೆಗೆ ಕೆಳಗೆ ಹೋಗಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿತು. ನಾಪತ್ತೆಯಾಗಿದ್ದ ಈ ನೌಕೆಯಲ್ಲಿದ್ದ ಐವರ ಪತ್ತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿತ್ತು. ಆದರೆ, ಕೊನೆಗೂ ಅವರ ಸುಳಿವು ಸಿಗಲಿಲ್ಲ. ಕೆನಾಡದ ನ್ಯೂಫೌಂಡ್ಲ್ಯಾಂಡ್ ಕರಾವಳಿ ಭಾಗದಿಂದ ಸುಮಾರು 400 ಮೈಲಿ ದೂರದಲ್ಲಿ ಟೈಟಾನಿಕ ಹಡಗಿನ ಅವಶೇಷಗಳು ಬಿದ್ದಿವೆ. ಅದನ್ನು ನೋಡಲು ಟೈಟಾನ್ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ ಹೋದಾಗ ಈ ದುರಂತ ಸಂಭವಿಸಿದೆ. ಅವರ ಪತ್ತೆಗಾಗಿ ಕಳೆದ ಭಾನುವಾರದಿಂದ ಅಮೆರಿಕ ಮತ್ತು ಕೆನಡಾ ಕರಾವಳಿ ಪಡೆ ದಿನದ 24 ಗಂಟೆ ನಿರಂತರ ಕಾರ್ಯಚರಣೆ ನಡೆಸಿತು. ನೌಕೆಯಲ್ಲಿ 96 ಗಂಟೆಗೆ ಆಗುವಷ್ಟು ಆಮ್ಲಜನಕ ಪೂರೈಕೆ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ತ್ವರಿತ ಹಾಗೂ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಅಂತಿಮವಾಗಿ ನೌಕೆಯ ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದ ಐವರು ಮೃತಪಟ್ಟಿರುವುದನ್ನು ಅಮೆರಿಕ ಕರಾವಳಿ ಪಡೆ ಖಚಿತ ಪಡಿಸಿದೆ.
ಕಾಣೆಯಾದ ಟೈಟಾನ್ ಹೆಸರಿನ ಜಲಾಂತರ್ಗಾಮಿ ನೌಕೆ 6.7 ಮೀಟರ್ ಉದ್ದವಿತ್ತು. ಕಾರ್ಬನ್ ಫೈಬರ್ ಮತ್ತು ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿತ್ತು. ಓರ್ವ ಪೈಲಟ್ ಮತ್ತು ನಾಲ್ವರು ಸಿಬ್ಬಂದಿಯನ್ನು ಗರಿಷ್ಠ 4000 ಮೀಟರ್ ಆಳದವರೆಗೆ ಕೊಂಡೊಯ್ಯುವ ಸಾಮರ್ಥ್ಯ ಇದಕ್ಕಿತ್ತು.
ಬಡಿಯುವ ಶಬ್ದ ಕೇಳಿಸಿತ್ತು…
ಎರಡು ದಿನಗಳ ಹಿಂದೆ ಕೆನಡಾ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧ ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಜೀವಂತವಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ನಂತರ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ