ಮಳೆಗಾಗಿ ಹೂತಿದ್ದ ಶವಗಳ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು…!

ವಿಜಯಪುರ: ಮಳೆಗಾಗಿ ಪ್ರಾರ್ಥಿಸಿ ನಾನಾ ರೀತಿಯ ಜನಪದ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಆದರೆ, ಈ ಊರಿನಲ್ಲಿ ಸ್ಮಶಾನದಲ್ಲಿ ಹೂತಿರುವ ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ವಿದ್ಯಮಾನ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲವಾಗಿದ್ದು ನಿರೀಕ್ಷಿತ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಜೂನ್ ಮುಗಿಯುತ್ತಾ ಬಂದರೂ ಬಹುತೇಕ ಮಳೆಯೇ ಆಗಿಲ್ಲ. ಕಂಗಲಾದ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜನರು ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರ ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ.
ಸ್ಮಶಾನದಲ್ಲಿ ಕೆಲವು ಶವಗಳು ನೀರಿಗಾಗಿ ಬಾಯಿತೆರೆದು ಕುಳಿತಿರುತ್ತವೆ. ಹೀಗಾಗಿ, ಅಂತಹ ಶವಗಳಿಗೆ ನೀರು ಬಿಡದೇ ಹೂತು ಹಾಕಿದ್ದರೆ ಊರಿಗೆ ಮಳೆ ಬರುವುದಿಲ್ಲ ಎಂಬ ವಿಚಿತ್ರ ನಂಬಿಕೆಯಿದೆ. ಹೀಗಾಗಿ, ಕಳೆದ ಕೆಲವು ದಿನಗಳ ಹಿಂದೆ ಮೃತಪಟ್ಟವರ ದೇಹಗಳನ್ನು ಹೂತಿದ್ದ ಸಮಾಧಿಗೆ ರಂಧ್ರವನ್ನು ಕೊರೆದು ಶವದ ಬಾಯಿಗೆ ನೀರು ಹೋಗುವಂತೆ ಟ್ಯಾಂಕರ್‌ ಮೂಲಕ ನೀರನ್ನು ಬಿಡಲಾಗುತ್ತದೆ.
ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾಧಿಗಳನ್ನು ರಂಧ್ರ ಮಾಡಿ ಕೊಳವೆ ಮೂಲಕ ಶವಗಳ ಬಾಯಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಪ್ರತಿಬಾರಿ ಮಳೆಗಾಲದಲ್ಲಿ ಸೂಕ್ತ ಸಮಯಕ್ಕೆ ಮಳೆ ಬರದೇ ಬರಗಾಲದ ಛಾಯೆ ಆವರಿಸುವ ಮುನ್ನವೇ ಮಳೆಗಾಗಿ ಗ್ರಾಮಸ್ಥರು ವಿವಿಧ ಆಚರಣೆ ಮಾಡುತ್ತಾರೆ. ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಗಂಗಾ ಪೂಜೆ, ಹೋಮ-ಹವನ, ಪ್ರಾರ್ಥನೆ ಹೀಗೆ ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಪ್ರಸ್ತುತ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಆಚರಣೆಗಳನ್ನು ಮಾಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆ‌ರ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement