ಕಾರವಾರ: ತಾಲೂಕಿನ ಗೋಪಶಿಟ್ಟಾದ ಮೂಲದ ಉದ್ಯಮಿಯೊಬ್ಬರ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಗೋಪಶಿಟ್ಟಾದ ನಿವಾಸಿ ಹಾಗೂ ಹಾಲಿ ಗೋವಾದಲ್ಲಿ ವಾಸವಾಗಿದ್ದ ಶ್ಯಾಮ ಪಾಟೀಲ(45), ಅವರ ಪತ್ನಿ ಜ್ಯೋತಿ ಪಾಟೀಲ(38) ಹಾಗೂ ಮಗ ದಕ್ಷ (12) ಎಂದು ಗುರುತಿಸಲಾಗಿದೆ. ಜ್ಯೋತಿ ಹಾಗೂ ದಕ್ಷ ಅವರ ಮೃತದೇಹ ಕಾರವಾರದ ದೇವಭಾಗ ಕಡಲತೀರದ ಬಳಿ ಪತ್ತೆಯಾಗಿದೆ. ಶ್ಯಾಮ ಪಾಟೀಲ ಅವರ ಮೃತದೇಹವು ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹೆಂಡತಿ ಹಾಗೂ ಮಗನನ್ನು ನದಿಗೆ ದೂಡಿದ ಶ್ಯಾಮ ಪಾಟೀಲ ನಂತರ ಗೋವಾದ ಕುಕ್ಕಳ್ಳಿಯ ಪಾಡಿಯನ್ನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಶ್ಯಾಮ ಪಾಟೀಲ ಗೋವಾದ ವಿವಿಧ ಕಂಪೆನಿಗೆ ಕಾರ್ಮಿಕರನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು ಹಾಗೂ ಕಂಪೆನಿಯೊಂದನ್ನು ಹೊಂದಿದ್ದರು. ಆದರೆ ವಿವಿಧ ಕಾರಣಕ್ಕೆ ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಹೆಂಡತಿ, ಮಕ್ಕಳನ್ನು ಕಾರವಾರದ ಕಾಳಿ ನದಿಯಲ್ಲಿ ದೂಡಿ ತಾನು ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಬೆಳಿಗ್ಗೆ ಮಗ ದಕ್ಷನ ಮೃತದೇಹ ಪತ್ತೆಯಾಗಿದ್ದು ಸಂಜೆ ವೇಳೆ ಪತ್ನಿ ಜ್ಯೋತಿಯ ಶವ ಪತ್ತೆಯಾಗಿದೆ. ದೇವಭಾಗದ ಬಳಿ ತೆರಳಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ