28 ವರ್ಷದ ಹಿಂದಿನ ಎಮ್ಮೆ ಸಾವಿನ ಪ್ರಕರಣದಲ್ಲಿ 83 ವರ್ಷದ ಪಾರ್ಶ್ವವಾಯು ಪೀಡಿತ ನಿವೃತ್ತ ಚಾಲಕನಿಗೆ ಬಂಧನ ವಾರಂಟ್

ಉತ್ತರ ಪ್ರದೇಶದಿಂದ ಅಚ್ಚರಿಯ ವಿದ್ಯಮಾನವೊಂದರಲ್ಲಿ ಬಸ್ ಅಪಘಾತದ 28 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಎಮ್ಮೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೇಲಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ 83 ವರ್ಷದ ವ್ಯಕ್ತಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಈ ಸುದ್ದಿ ತಿಳಿದು ಆ ವ್ಯಕ್ತಿಯು ಆಶ್ಚರ್ಯಚಕಿತರಾದರು. ಈಗ ಪಾರ್ಶ್ವವಾಯು ಪೀಡಿತರಾಗಿರುವ ಅವರು, ತಮ್ಮ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ ಒಂದು ದಿನದ ನಂತರ ಪೊಲೀಸರು ಮನೆಗೆ ಬಂದಾಗ ಆಘಾತಕ್ಕೊಳಗಾದರು ಎಂದು ವರದಿಯಾಗಿದೆ.
ಬಾರಾಬಂಕಿಯ ದಯಾನಂದ ದೂರವಾಣಿ ವಿನಿಮಯ ಕೇಂದ್ರದ ಹಿಂದೆ ವಾಸಿಸುತ್ತಿರುವ ಅಚ್ಚನ್‌ ಎಂಬವರು ಕೈಸರ್ ಬಾಗ್ ಡಿಪೋದಲ್ಲಿ ಬಸ್ ಚಾಲಕರಾಗಿದ್ದರು. ನಂತರ ಅವರನ್ನು ಚಾರ್ಬಾಗ್ ಮತ್ತು ಬಾರಾಬಂಕಿ ಬಸ್ ಡಿಪೋಗಳಿಗೆ ನಿಯೋಜಿಸಲಾಯಿತು.
1995 ರಲ್ಲಿ ಅಚ್ಚನ್‌ ಲಕ್ನೋದಿಂದ ಬರೇಲಿ ಮತ್ತು ಫರೀದಪುರಕ್ಕೆ ಬಸ್‌ ಚಾಲನೆ ಮಾಡುವಾಗ ರಾತ್ರಿ ಈ ಘಟನೆ ಸಂಭವಿಸಿದೆ. ಅವರ ಪ್ರಕಾರ, ಎಲ್ಲಿಂದಲೋ ಒಂದು ಎಮ್ಮೆ ರಸ್ತೆಯ ಮೇಲೆ ಒಮ್ಮೆಲೇ ಬಂದಿತು ಮತ್ತು ಆ ಕ್ಷಣದಲ್ಲಿ ಬ್ರೇಕ್ ಹಾಕಲು ಸಮಯವಿರಲಿಲ್ಲ. ಬಸ್‌ಗೆ ಎಮ್ಮೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದೆ. ಈ ಕುರಿತು ಫರೀದಪುರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಫರೀದಪುರ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ವೃದ್ಧ ಹೇಳಿದ್ದಾರೆ. ಅಚ್ಚನ್‌ ಅವರು ಈಗ ಬಾರಾಬಂಕಿ ಡಿಪೋದಲ್ಲಿ ಸೇವೆಯಿಂದ ನಿವೃತ್ತರಾಗಿ ಇಪ್ಪತ್ತು ವರ್ಷದ ಮೇಲಾಗಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಸೋಮವಾರ, ಫರೀದಪುರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ವಿಜಯಪಾಲ ಅವರು ಮನೆಗೆ ಆಗಮಿಸಿ ವಾರಂಟ್ ತೋರಿಸಿದರು. ಅದನ್ನು ನೋಡಿದ ನಿವೃತ್ತ ಬಸ್ ಚಾಲಕ ಆಘಾತಕ್ಕೊಳಗಾದರು. ಅಚ್ಚನ್‌ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಮತ್ತು ನಡೆಯುವಾಗಲೂ ಕಷ್ಟಪಡುತ್ತಾರೆ. ಅವರು ಸ್ಥಿತಿ ನೋಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗಿ ಹಾಜರಾತಿ ದಾಖಲು ಮಾಡಿ. ಇಲ್ಲವಾದಲ್ಲಿ ಬಂಧನವಾಗಬಹುದು ಎಂದು ವಿಷಯ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಎರಡು ಬಾರಿ ಸಮನ್ಸ್ ಸ್ವೀಕರಿಸಿದ್ದಾಗಿ ಅವರು ಹೇಳಿದರು, ಆದರೆ ಎರಡೂ ಸಂದರ್ಭಗಳಲ್ಲಿ ಜಾಮೀನು ಸಿಕ್ಕಿದೆ. ಎರಡು ದಶಕಗಳಿಂದ ತಣ್ಣಗಾಗಿದ್ದ ಈ ಪ್ರಕರಣ ಈಗ ಹಠಾತ್ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದ ಸಂಕಷ್ಟಕ್ಕೆ ಸಿಲುಕಿರುವುದಾಗಿ ಆರೋಪಿಸಿದ್ದಾರೆ.
ಏತನ್ಮಧ್ಯೆ, ಅಚ್ಚನ್‌ ಅವರು ಘಟನೆಯನ್ನು ವಿವರಿಸಿ ಅರ್ಜಿಯನ್ನು ಬರೆದು ಲಕ್ನೋ ಕೇಂದ್ರ ಕಚೇರಿಗೆ ಕಳುಹಿಸಿದರೆ ಪ್ರಕರಣವನ್ನು ಬಗೆಹರಿಸಲು ಇಲಾಖೆಯಿಂದ ಪ್ರಯತ್ನಿಸಲಾಗುವುದು ಎಂದು ಸಾರಿಗೆ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರಾಜೇಶಕುಮಾರ ಸಿಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement