ಅಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ; ಮಗು ಸೇರಿ 6 ಮಂದಿ ಸಾವು

ಕಲಬುರಗಿ: ಆಳಂದ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳ ವಾಡಿ ಬಳಿ ಕ್ರೂಸರ್ ಮತ್ತು ಸಿಮೆಂಟ್ ಬಲ್ಕರ್ ಲಾರಿ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ 6 ಜನರು ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರು ಎಂದು ಹೇಳಲಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್‌ನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಕ್ರೂಸರ್ ವಾಹನದಲ್ಲಿ ಎರಡು ಕುಟುಂಬದವರು ಅಫಜಲಪುರ ತಾಲೂಕಿನ ಘತ್ತರಗಿ ದರ್ಶನ ಮಾಡಿ, ನಂತರ ಅಕ್ಕಲಕೋಟೆಯ ಸ್ವಾಮಿ ಸಮರ್ಥ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಈ ದುರಂತ ನಡೆದಿದೆ. ಮೃತರಲ್ಲಿ ಐವರು ಮಹಿಳೆಯರು ಹಾಗೂ ಒಂದು ಮಗು ಸೇರಿದೆ ಎಂದು ಪೊಲೀಸರಿಂದ ತಿಳಿದುಬಂದಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement