ಮಹಾರಾಷ್ಟ್ರ ರಾಜಕಾರಣದಲ್ಲಿ ಹೈಡ್ರಾಮಾ :ಆಗ ಶಿವಸೇನೆ VS ಶಿವಸೇನೆ..ಈಗ ಎನ್‌ಸಿಪಿ VS ಎನ್‌ಸಿಪಿ

ಮುಂಬೈ: ಪ್ರತಿಪಕ್ಷದ ದೊಡ್ಡ ಮೈತ್ರಿಕೂಟ ಜೋಡಿಸಲು ಸಂಕೀರ್ಣವಾದ ರಾಜಕೀಯ ತಂತ್ರಗಾರಿಕೆಯ ಹೆಗ್ಗಳಿಕೆಗೆ ಪಾತ್ರರಾಗಿರುವ ಶರದ ಪವಾರ್ ಅವರು ತಮ್ಮ ಅಣ್ಣನ ಮಗ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಉನ್ನತ ನಾಯಕ ಅಜಿತ ಪವಾರ್ ಎನ್‌ಸಿಪಿ ತೊರೆದು ಎನ್‌ಡಿಎ ಸೇರಿ ಉಪಮುಖ್ಯಮಂತ್ರಿಯಾದ ನಂತರ ಭಾರಿ ಆಘಾತ ಅನುಭವಿಸಿದ್ದಾರೆ.
40 ಶಿವಸೇನಾ ಶಾಸಕರೊಂದಿಗೆ ಏಕನಾಥ್ ಶಿಂಧೆ ಹೊರನಡೆದ ಒಂದು ವರ್ಷದ ನಂತರ ಅಜಿತ ಪವಾರ್ ಅವರು ಎನ್‌ಸಿಪಿ ಪಕ್ಷ ತೊರೆದು ಎಂಟು ಶಾಸಕರೊಂದಿಗೆ ಎನ್‌ಡಿಎ ಮೈತ್ರಿಕೂಟವನ್ನು ಭಾನುವಾರ ಸೇರಿದ್ದಾರೆ. ತನಗೆ 40 ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಕೂಟ ಒಡೆಯಲು ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಯಶಸ್ವಿಯಾಗಿದೆ.
ಅಜಿತ ಪವಾರ್ ಅವರು, ಇತ್ತೀಚೆಗೆ ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಪ್ರಫುಲ್ ಪಟೇಲ ಮತ್ತು ಇತರ ಪ್ರಮುಖರಾದ ಛಗನ್ ಭುಜಬಲ್, ದಿಲೀಪ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ರಾಮರಾಜೇ ನಿಂಬಾಳ್ಕರ್, ಧನಂಜಯ ಮುಂಡೆ, ಅದಿತಿ ತತ್ಕರೆ, ಸಂಜಯ ಬನ್ಸೋಡೆ, ಧರ್ಮರಾವ್ ಬಾಬಾ ಅತ್ರಮ್, ಮತ್ತು ಅನಿಲ ಭೈದಾಸ್ ಪಾಟೀಲ ಅವರೊಂದಿಗೆ
ಆಡಳಿತಾರೂಢ ಮಂತ್ರಿಕೋಟ ಸೇರಿದ ನಂತರ ಅವರೆಲ್ಲ ಸಚಿವರಾಗಿದ್ದಾರೆ. ಫಡ್ನವೀಸ್, ಶನಿವಾರ ಮಹಾರಾಷ್ಟ್ರ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದರು. ಏಕನಾಥ ಶಿಂಧೆ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು.

ಗಮನಾರ್ಹವೆಂದರೆ, ಅಜಿತ ಪವಾರ್ ಎನ್‌ಸಿಪಿ ಶಾಸಕರ ಗುಂಪಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡರೆ ಸರ್ಕಾರದಿಂದ ಹೊರನಡೆಯುವುದಾಗಿ ಶಿಂಧೆ ಏಪ್ರಿಲ್‌ನಲ್ಲಿ ಎಚ್ಚರಿಸಿದ್ದರು.
“ಈಗ ನಮಗೆ ಒಬ್ಬ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಈಗ ಟ್ರಿಪಲ್ ಇಂಜಿನ್ ಆಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ, ನಾನು ಅಜಿತ ಪವಾರ್ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ. ಅವರ ಅನುಭವವು ಸಹಾಯ ಮಾಡುತ್ತದೆ” ಎಂದು ಪ್ರಮಾಣ ವಚನ ಸಮಾರಂಭದ ನಂತರ ಏಕನಾಥ್ ಶಿಂಧೆ ನಂತರ ಹೇಳಿದ್ದಾರೆ.
ಶರದ ಪವಾರ್ ಅವರ ಪುತ್ರಿ ಮತ್ತು ಎನ್‌ಸಿಪಿಯ ಉನ್ನತ ನಾಯಕಿ ಸುಪ್ರಿಯಾ ಸುಳೆ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಏರಿಸಿದ ನಂತರ ಶರದ್ ಪವಾರ್ ಅವರು ರಾಜೀನಾಮೆ ನೀಡುವ ಆಘಾತಕಾರಿ ಪ್ರಸ್ತಾಪದ ನಂತರ, ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತಾವು ಮುಂದುವರಿಯಲು ಬಯಸುವುದಿಲ್ಲ ಎಂದು ಅಜಿತ್ ಪವಾರ್ ಇತ್ತೀಚೆಗೆ ಹೇಳಿದ್ದರು. .

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

ಶರದ್ ಪವಾರ್ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರು, ಆದರೆ ತಮ್ಮದೇ ಆದ ಮೈತ್ರಿಕೂಟವನ್ನು ಒಟ್ಟಿಗೆ ಇಡಲು ಅವರಿಗೆ ಸಾಧ್ಯವಾಗದೇ ಹೋಯಿತು. ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿಯ ಒಟ್ಟು 53 ಶಾಸಕರ ಪೈಕಿ 40ಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ಅಜಿತ ಪವಾರ್ ಹೇಳಿಕೊಂಡಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳಿಂದ ತಪ್ಪಿಸಿಕೊಳ್ಳಲು ಅಜಿತ ಪವಾರ್ 36 ಕ್ಕೂ ಹೆಚ್ಚು ಶಾಸಕರ ಬೆಂಬಲಬೇಕು.ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಎಲ್ಲಾ ಬಂಡಾಯ ಶಾಸಕರ ಅನರ್ಹತೆಗೆ ಎನ್‌ಸಿಪಿ ಮುಂದಾಗಬಹುದು.
ಎನ್‌ಸಿಪಿ ಸದಸ್ಯರಾಗಿರುವ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕೆ ಇದು ಒಂದು ವರ್ಷದೊಳಗೆ ಎರಡನೇ ಆಘಾತವಾಗಿದೆ. ಕಳೆದ ವರ್ಷ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನಕ್ಕೆ ಏಕನಾಥ ಶಿಂಧೆ ಬಣದ ಬಂಡಾಯ ಕಾರಣವಾಯಿತು. ಉದ್ಧವ್‌ ಠಾಕ್ರೆ ಅವರ ನಾಯಕತ್ವ ಮತ್ತು ಸೈದ್ಧಾಂತಿಕವಾಗಿ ವಿರೋಧಿಸಿದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಅವರ ಮೈತ್ರಿಯಿಂದ ಅತೃಪ್ತರಾಗಿರುವುದಾಗಿ ಬಂಡಾಯವೆದ್ದ ಗುಂಪು ಪ್ರತಿಪಾದಿಸಿತ್ತು. ಬಂಡಾಯದ ಪರಿಣಾಮವಾಗಿ, ಬಿಜೆಪಿಯು ಬಂಡಾಯವೆದ್ದ ಶಿವಸೇನೆ ಶಾಸಕರು ಮತ್ತು ಕೆಲವು ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ಈಗ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ.

ಎನ್‌ ಸಿಪಿ VS ಎನ್‌ ಸಿಪಿ?
ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಒಂದು ವರ್ಷವನ್ನು ಪೂರೈಸಿದ ಮೂರು ದಿನಗಳ ನಂತರ ಅಜಿತ ಪವಾರ್ ಅವರ ಬಂಡಾಯ ಕಾಣಿಸಿಕೊಂಡಿದೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಗೆ (ಎಂವಿಎ)ಈ ಬೆಳವಣಿಗೆ ಮತ್ತೊಂದು ಆಘಾತವಾಗಿದೆ, ಇದು ಈಗಾಗಲೇ ಶಿವಸೇನೆಯಲ್ಲಿನ ವಿಭಜನೆಯ ಕುರಿತು ಸುದೀರ್ಘ ಕಾನೂನು ಹೋರಾಟದಲ್ಲಿ ನಲುಗುತ್ತಿದೆ.
ಎನ್‌ಸಿಪಿ ನಾಯಕರ ದಿಗ್ಭ್ರಮೆಗೊಳಿಸುವ ಬಂಡಾಯ ಶರದ ಪವಾರ್‌ಗೆ ದೊಡ್ಡ ಮುಜುಗರವನ್ನು ಉಂಟುಮಾಡಿದೆ, ಏಕೆಂದರೆ ಅವರ ಸ್ವಂತ ಅಣ್ಣನ ಮಗನೇ ಪಕ್ಷವನ್ನು ಒಡೆದುಕೊಂಡು ಹೋಗಿದ್ದಾರೆ. ಎನ್‌ಸಿಪಿಯ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸಿದ ಅಜಿತ ಪವಾರ್, ತಾನು ಮತ್ತು ಇತರ ಶಾಸಕರು ಬಿಜೆಪಿ-ಶಿವಸೇನಾ ಮೈತ್ರಿಕೂಟವನ್ನು ನಿಜವಾದ ಎನ್‌ಸಿಪಿಯಾಗಿ ಸೇರಿಕೊಂಡಿರುವುದಾಗಿ ಹೇಳಿದ್ದಾರೆ.
“ಎನ್‌ಸಿಪಿ ಪಕ್ಷ ಸರ್ಕಾರಕ್ಕೆ ಸೇರ್ಪಡೆಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎನ್‌ಸಿಪಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಾವು ಬಳಸುತ್ತೇವೆ… ಪಕ್ಷವು ನಮ್ಮೊಂದಿಗಿದೆ, ಬಹುಪಾಲು ಶಾಸಕರು ನಮ್ಮೊಂದಿಗಿದ್ದಾರೆ” ಎಂದು ಅಜಿತ ಪವಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

ಮಹಾರಾಷ್ಟ್ರ ವಿಕಾಸ ಅಘಾಡಿ ಈಗ ಎಲ್ಲಿ ನಿಂತಿದೆ?
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಅಜಿತ್ ಪವಾರ್‌ಗೆ ಎನ್‌ಸಿಪಿಯ 40 ಶಾಸಕರ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಪ್ರಸ್ತುತ ಶರದ್ ಪವಾರ್ ಅವರ ಪಕ್ಷವು ಮಹಾರಾಷ್ಟ್ರ ವಿಧಾನಸಭೆಯಲ್ಲಿ 53 ಶಾಸಕರನ್ನು ಹೊಂದಿದೆ.
ಪಕ್ಷಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಂದ ಪಾರಾಗಲು ಅಜಿತ್ ಪವಾರ್ ಅವರಿಗೆ ಕನಿಷ್ಠ 36 ಶಾಸಕರ ಅಗತ್ಯವಿದೆ. ಆದಾಗ್ಯೂ, ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಎಲ್ಲಾ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಎನ್‌ಸಿಪಿಗೆ ಇನ್ನೂ ಅಧಿಕಾರವಿದೆ.
ಮೇಲಿನ ಅಂಕಿ ಅಂಶಗಳನ್ನು ತೆಗೆದುಕೊಂಡರೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ 121 ಸ್ಥಾನಗಳನ್ನು ಹೊಂದಿದ್ದ ಮಹಾ ವಿಕಾಸ್ ಅಘಾಡಿ ಈಗ 81 ಕ್ಕೆ ಇಳಿಯಲಿದೆ(ಅಜಿತ್ ಪವಾರ್ 40 ಶಾಸಕರ ಬೆಂಬಲವನ್ನು ಪ್ರತಿಪಾದಿಸಿದ್ದಾರೆ). ಎನ್‌ಸಿಪಿ ಬಂಡಾಯದೊಂದಿಗೆ 40 ಎನ್‌ಸಿಪಿ ಶಾಸಕರ ಬೆಂಬಲ ಸಿಕ್ಕರೆ, 165 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ 205 ಸ್ಥಾನಗಳನ್ನು ಗಳಿಸಲಿದೆ. ಉಳಿದ ಎರಡು ಸ್ಥಾನಗಳನ್ನು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಹೊಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement