ನವದೆಹಲಿ: ಭಾನುವಾರ ಬೆಳಗಿನ ಜಾವ 1:30 ರಿಂದ 2:30ರ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಚಾನೆಲ್ ದಿಯಾ ಟಿವಿ ಮಂಗಳವಾರ ವರದಿ ಮಾಡಿದೆ.
ಐದು ತಿಂಗಳ ಅವಧಿಯಲ್ಲಿ ಕಾನ್ಸುಲೇಟ್‌ನ ಮೇಲಿನ ಇದು ಎರಡನೇ ದಾಳಿಯಾಗಿದ್ದು, ಖಲಿಸ್ತಾನಿ ಬೆಂಬಲಿಗರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖಲಿಸ್ತಾನಿ ಬೆಂಬಲಿಗರು ಮಾರ್ಚ್‌ನಲ್ಲಿ ಭಾರತೀಯ ದೂತಾವಾಸಕ್ಕೆ ಹಅನಿ ಮಾಡಿದ್ದರು.
ಟಿವಿ ಚಾನೆಲ್ ಬೆಂಕಿಯ ವೀಡಿಯೊವನ್ನು ಹಂಚಿಕೊಂಡಿದೆ, ಅದನ್ನು ಖಲಿಸ್ತಾನಿ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎಂದು ಅದು ಹೇಳಿಕೊಂಡಿದೆ. ಸ್ವತಂತ್ರವಾಗಿ ವೀಡಿಯೊದ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯವಾಗಲಿಲ್ಲ.
ಈವರೆಗೆ, ಯಾರಿಗೂ ಗಾಯವಾದ ವರದಿಗಳಿಲ್ಲ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆಯಿಂದ ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಪ್ರಯತ್ನವನ್ನು ಅಮೆರಿಕ “ಬಲವಾಗಿ ಖಂಡಿಸುತ್ತದೆ” ಎಂದು ಹೇಳಿದರು.
“ಅಮೆರಿಕದಲ್ಲಿ ರಾಜತಾಂತ್ರಿಕ ಸೌಲಭ್ಯಗಳು ಅಥವಾ ವಿದೇಶಿ ರಾಜತಾಂತ್ರಿಕರ ವಿರುದ್ಧ ವಿಧ್ವಂಸಕತೆ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ” ಎಂದು ಅವರು ಹೇಳಿದರು.
ಮಾರ್ಚ್‌ನಲ್ಲಿ, ಪಂಜಾಬ್ ಪೊಲೀಸರು ಭಾರತದಲ್ಲಿ ಅಮೃತಪಾಲ್ ಸಿಂಗ್‌ಗಾಗಿ ರಾಷ್ಟ್ರವ್ಯಾಪಿ ಹುಡುಕಾಟವನ್ನು ಪ್ರಾರಂಭಿಸಿದಾಗ, ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟಿಗೆ ಹಾನಿ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ