ನವದೆಹಲಿ: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಗ್ರೇಟರ್ ನೋಯ್ಡಾ ನಿವಾಸಿಯೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಮಹಿಳೆ ಭಾರತಕ್ಕೆ ಬರಲು ತನ್ನ ಭೂಮಿಯನ್ನು 12 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ ಮತ್ತು ಭಾರತಕ್ಕೆ ಪ್ರವೇಶಿಸುವ ಮಾರ್ಗಗಳನ್ನು ಯೂಟ್ಯೂಬ್‌ನಲ್ಲಿ ಹುಡುಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಮಾ ಗುಲಾಮ್ ಹೈದರ್, 27, ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಿಂಡ್ ಹಜಾನಾ ಗ್ರಾಮದ ನಿವಾಸಿಯಾಗಿದ್ದು, ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತೀಯ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿದ್ದಳು. ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ಇತರ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು.
ಗೇಮಿಂಗ್ ಪ್ಲಾಟ್‌ಫಾರ್ಮ್ PUBG ಮೂಲಕ ಮಹಿಳೆ ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಸಿಂಗ್ (22) ಎಂಬಾತನ ಸಂಪರ್ಕಕ್ಕೆ ಬಂದಿದ್ದಾಳೆ. ಪರಿಚಯ ಪ್ರೇಮಕ್ಕೆ ತಿರಗಿ ಇಬ್ಬರೂ ಮದುವೆಯಾಗಲು ಬಯಸಿದ್ದರು ಮತ್ತು ಕೋರ್ಟ್ ವಿವಾಹಕ್ಕಾಗಿ ಸ್ಥಳೀಯ ವಕೀಲರನ್ನು ಸಂಪರ್ಕಿಸಿದರು. ವಕೀಲರು ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಸಚಿನ್ ಮತ್ತು ಆತನ ತಂದೆ ನೇತ್ರಪಾಲ್ ಸಿಂಗ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸೀಮಾ ಮತ್ತು ಸಚಿನ್ ಅವರನ್ನು ಹರಿಯಾಣದ ಬಲ್ಲಭಗಢದಿಂದ ಬಂಧಿಸಲಾಯಿತು.
ಗ್ರೇಟರ್ ನೋಯ್ಡಾ ಉಪ ಪೊಲೀಸ್ ಕಮಿಷನರ್ ಸಾದ್ ಮಿಯಾ ಖಾನ್ ಅವರು, “ಸೀಮಾ ಮತ್ತು ಅವಳ ಪತಿಯ ನಡುವಿನ ಸಂಬಂಧವು ಸರಿಯಾಗಿಲ್ಲ. ಏತನ್ಮಧ್ಯೆ,ಅವಳು 2019-20ರಲ್ಲಿ ಪಬ್‌ಜಿ ಗೇಮ್ಸ್ ಮೂಲಕ ಸಚಿನ್‌ಗೆ ಹತ್ತಿರವಾದರು. ನಾವು ಆಕೆಯ ಮದುವೆ ನೋಂದಣಿ ಪ್ರಮಾಣಪತ್ರಗಳು, ಪಾಕಿಸ್ತಾನಿ ಪಾಸ್‌ಪೋರ್ಟ್ ಮತ್ತು ಪೌರತ್ವ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಭಾರತಕ್ಕೆ ಬರಲು ಆಕೆ ತನಗೆ ಸೇರಿದ ಭೂಮಿಯನ್ನು ಸುಮಾರು 12 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಮಹಿಳೆ ಹೇಳಿದ್ದಾರೆ. ಅಲ್ಲದೆ ಆಕೆ ತನ್ನ ಉಳಿತಾಯದ ಒಂದಿಷ್ಟು ಹಣವನ್ನೂ ಅದಕ್ಕೆ ಸೇರಿಸಿಕೊಂಡು ಭಾರತಕ್ಕೆ ಬಂದಿದ್ದಾಳೆ ಎಂದು ಅವರು ಹೇಳಿದರು.
ಅವಳು ಭಾರತಕ್ಕೆ ಬರಲು ಪಾಕಿಸ್ತಾನದ ಟ್ರಾವೆಲ್ ಏಜೆನ್ಸಿಯನ್ನು ಸಂಪರ್ಕಿಸಿದಳು. ಭಾರತಕ್ಕೆ (ಪಾಕಿಸ್ತಾನದಿಂದ) ತಲುಪುವ ಮಾರ್ಗಗಳ ಕುರಿತು ಅವಳು ಯೂಟ್ಯೂಬ್‌ನಲ್ಲಿ ಅನೇಕ ವೀಡಿಯೊಗಳನ್ನು ನೋಡಿದಳು. ಅಲ್ಲಿಂದ ನೇಪಾಳಕ್ಕೆ ಹೋದರೆ ಭಾರತಕ್ಕೆ ಪ್ರವೇಶಿಸಬಹುದು ಎಂಬ ಆಲೋಚನೆ ಅವಳಿಗೆ ಬಂದಿದೆ. ಟ್ರಾವೆಲ್ ಏಜೆಂಟ್ ಆಕೆಗೆ ಪಾಕಿಸ್ತಾನದಿಂದ ನೇಪಾಳಕ್ಕೆ ಟಿಕೆಟ್ ನೀಡಿದ್ದಾನೆ. ಅವಳು ನೇಪಾಳದಿಂದ ಪೋಖರಾ ಮೂಲಕ ಬಸ್‌ನಲ್ಲಿ ಭಾರತವನ್ನು ತಲುಪಿದಳು. ಮಾರ್ಗಮಧ್ಯೆ ಆಕೆ ವಾಟ್ಸಾಪ್ ಮೂಲಕ ಸಚಿನ್‌ನನ್ನು ಸಂಪರ್ಕಿಸಿದ್ದಾಳೆ ಎಂದು ಡಿಸಿಪಿ ತಿಳಿಸಿದ್ದಾರೆ.
ಸೀಮಾ ಫೆಬ್ರವರಿ 2014 ರಲ್ಲಿ ಸಿಂಧ್ ಪ್ರಾಂತ್ಯದ ಮೊಹಮ್ಮದ್ ಪುರದ ರಟ್ಟೋಡೆರೊ ಕರ್ಣಕರ್ಣಿ ನಿವಾಸಿ ಗುಲಾಮ್ ಹೈದರ್ ಎಂಬಾತನನ್ನು ವಿವಾಹವಾದಳು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವಳಿಗೆ ನಾಲ್ಕು ಮಕ್ಕಳಿದ್ದಾರೆ. ಅವಳ ಪತಿ ಕರಾಚಿಯಲ್ಲಿ ಟೈಲ್ಸ್ ಅಳವಡಿಸುವ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರ. 2019 ರಲ್ಲಿ ಆತ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ಹೋಗಿದ್ದ. ಅದೇ ವರ್ಷ PUBG ಆಡುವಾಗ ಸೀಮಾ ಸಚಿನ್‌ನ ಸಂಪರ್ಕಕ್ಕೆ ಬಂದಳು. ನಂತರ ಅವರಿಬ್ಬರು ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು. ಅವರು ನಿಯಮಿತವಾಗಿ ಪರಸ್ಪರ ಕರೆ ಮಾಡುತ್ತಿದ್ದರು ಎಂದು ಅಧಿಕಾರಿ ಹೇಳಿದರು.
ಅವರು ಸಾಮಾಜಿಕ ಜಾಲತಾಣದ ಮೂಲಕ ಹತ್ತಿರವಾದರು ಮತ್ತು ವೈಯಕ್ತಿಕವಾಗಿ ಇಬ್ಬರು ಪರಸ್ಪರ ಭೇಟಿಯಾಗಲು ಪ್ರಯತ್ನಿಸಿದರು. ಸೀಮಾ ಮಾರ್ಚ್ 2023 ರಲ್ಲಿ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಲು ಶಾರ್ಜಾ ಮೂಲಕ ನೇಪಾಳದ ಕಠ್ಮಂಡುವಿಗೆ ಹೋದಳು. ಕಠ್ಮಂಡುವಿನಲ್ಲಿ 7 ದಿನಗಳ ಕಾಲ ಹೋಟೆಲ್‌ನಲ್ಲಿ ತಂಗಿದ್ದಳು, ಆದರೆ ಪಾಕಿಸ್ತಾನಕ್ಕೆ ಮರಳಿದಳು. ಪ್ರವಾಸಿ ವೀಸಾದಲ್ಲಿ ತನ್ನ 4 ಮಕ್ಕಳೊಂದಿಗೆ ಮತ್ತೆ ನೇಪಾಳಕ್ಕೆ ಬಂದಳು. ನಂತರ ಬಸ್ ಹಿಡಿದು ದೆಹಲಿಗೆ ಬಂದಳು. ನಂತರ ಆಕೆ ರಬುಪುರ ಪಟ್ಟಣದ ಅಂಬೇಡ್ಕರ್ ನಗರಕ್ಕೆ ಬಂದು ಮೇ 13ರಿಂದ ಅಕ್ರಮವಾಗಿ ವಾಸಿಸುತ್ತಿದ್ದಳು. ಕೆಲವು ದಿನಗಳ ನಂತರ, ಸಚಿನ್ ತಂದೆಗೆ ಈ ವಿಷಯ ತಿಳಿದಾಗ, ಅವರು ಕೋರ್ಟ್ ಮದುವೆಗಾಗಿ ವಕೀಲರನ್ನು ಸಂಪರ್ಕಿಸಿದರು. ಆಗ ನಮಗೆ ಈ ವಿಷಯ ತಿಳಿಯಿತು. ಸಚಿನ್ ರಬುಪುರದ ಕಿರಾಣಿ ಅಂಗಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾನೆ. ಮಹಿಳೆ 5 ನೇ ತರಗತಿಯವರೆಗೆ ಮಾತ್ರ ಓದಿದ್ದಾಳೆ, ಆದರೆ ಆಕೆಗೆ ಪ್ರಾಥಮಿಕ ಇಂಗ್ಲಿಷ್ ತಿಳಿದಿದೆ ಮತ್ತು ಕಂಪ್ಯೂಟರ್ ಅನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿದೆ ಎಂದು ಡಿಸಿಪಿ ಹೇಳಿದರು.
ಏಜೆಂಟರೊಬ್ಬರ ಮೂಲಕ ಅವಳು ಭಾರತದ ಗಡಿಯನ್ನು ದಾಟಿದಳು ಮತ್ತು ಸಚಿನ್ ಅವಳಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದ. ಪಾಕಿಸ್ತಾನವನ್ನು ತೊರೆಯುವ ಮೊದಲು, ಅವಳು ಕರಾಚಿಯಲ್ಲಿ ವಾಸಿಸುತ್ತಿದ್ದಳು. ಆಕೆಯ ಮಕ್ಕಳು ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅವರು ಹೇಳಿದರು.
ಅವಳು ಬಂದಾಗ, ಸಚಿನ್ ಅವಳಿಗೆ ಅಂಬೇಡ್ಕರ್ ನಗರ ಕಾಲೋನಿಯಲ್ಲಿ ಬಾಡಿಗೆಗೆ ಕೋಣೆ ಪಡೆದನು. ಸುಮಾರು ಒಂದು ವಾರದ ನಂತರ, ಆತ ಅವಳನ್ನು ತನ್ನ ಕುಟುಂಬಕ್ಕೆ ಪರಿಚಯಿಸಿದ. “ತಂದೆ ಅದನ್ನು ವಿರೋಧಿಸಲಿಲ್ಲ ಮತ್ತು ಮದುವೆಯ ನಂತರ ಅವರನ್ನು ಇಲ್ಲಿ ನೆಲೆಸುವಂತೆ ಯೋಜಿಸಿದ್ದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
“ಪ್ರಾಥಮಿಕ ತನಿಖೆಯಲ್ಲಿ ಸಚಿನ್ ಸಂಪರ್ಕಕ್ಕೆ ಬಂದ ನಂತರ ಅವರಿಬ್ಬರು ಹತ್ತಿರವಾದರು ಮತ್ತು ಅವಳು ಭಾರತಕ್ಕೆ ಬರಲು ನಿರ್ಧರಿಸಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಬ್ಯೂರೋ ಆಫ್ ಇಮಿಗ್ರೇಷನ್, ಸೆಂಟ್ರಲ್ ಏಜೆನ್ಸಿಗಳು, ಉತ್ತರ ಪ್ರದೇಶ ಎಟಿಎಸ್ ಇತ್ಯಾದಿಗಳೊಂದಿಗೆ ವಿವರಗಳನ್ನು ಹಂಚಿಕೊಂಡಿದ್ದೇವೆ. ಅವರು ಕೂಡ ತನಿಖೆ ನಡೆಸುತ್ತಿದ್ದಾರೆ. ಆಕೆ ಗಡಿ ದಾಟಲು ನಿಜವಾದ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಅವರು ಹೇಳಿದರು.
ಗಡಿ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಸಂಬಂಧಪಟ್ಟ ಸಂಸ್ಥೆಗೆ ಪತ್ರ ಕಳುಹಿಸಲಾಗುವುದು ಎಂದು ಡಿಸಿಪಿ ಖಾನ್ ತಿಳಿಸಿದ್ದಾರೆ. ವಿದೇಶಿಯರ ಕಾಯಿದೆಯ ಸೆಕ್ಷನ್ 14, ಐಪಿಸಿ ಸೆಕ್ಷನ್ 120 ಮತ್ತು 34 ಮತ್ತು ಪಾಸ್‌ಪೋರ್ಟ್ ಕಾಯಿದೆ, 1920 ಸೆಕ್ಷನ್ 3,4, 5ರ ಅಡಿಯಲ್ಲಿ ಪ್ರಕರಣವನ್ನು ರಬುಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ