ರಾಜ್ಯದಲ್ಲಿ ಮಹಾ ಮಳೆಗೆ 20 ಸಾವು : ಸಚಿವ ಕೃಷ್ಣ ಭೈರೇಗೌಡ

ಕುಮಟಾ : ರಾಜ್ಯದಲ್ಲಿ ಮಳೆಗೆ 20 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟ ಸಂಬಂಧ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಸಿದ್ಧವಿದ್ದು, ಹಾನಿಯಾದ ಮನೆಗಳಿಗೆ 1.25 ಲಕ್ಷ ಪರಿಹಾರ ನೀಡುತ್ತೇವೆ ಎಂದರು.
ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಜುಲೈ ಕೊನೆ ವಾರದವರೆಗೆ ಕಾದುನೋಡಿ ಮೋಡ ಬಿತ್ತನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಕೇಂದ್ರದ ನಿಯಮಗಳ ಅನ್ವಯ ಮೋಡ ಬಿತ್ತನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement