ಪತ್ನಿ ಎದುರಲ್ಲೇ ಪತಿ ಹತ್ಯೆ ಪ್ರಕರಣ​ : ಭೀಮನ ಅಮಾವಾಸ್ಯೆ ದಿನ ದೇಗುಲದಲ್ಲಿ ಪ್ರೇಮಿಯಿಂದ ಗಂಡನ ಹತ್ಯೆ ಮಾಡಿಸಿದ ಪತ್ನಿ…!

 ಬೆಳಗಾವಿ : ವಡೇರಹಟ್ಟಿ ಗ್ರಾಮದಲ್ಲಿ ಹೆಂಡತಿ ಎದುರೇ ನಡೆದಿದ್ದ ಗಂಡನ ಭೀಕರ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಮೂಡಲಗಿ ತಾಲೂಕು ವಡೇರಟ್ಟಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬನ ಹತ್ಯೆಯಿಂದಾಗಿ ಇಡೀ ಗ್ರಾಮವನ್ನೇ ತಲ್ಲಣಗೊಂಡಿದೆ. ಭೀಮನ ಅಮಾವಾಸ್ಯೆಯಾದ ಸೋಮವಾರ ಗಂಡನ ಪೂಜೆ ಮಾಡಿದರೆ ಆತನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದೇ ದಿನ ಹೆಂಡತಿಯೊಬ್ಬಳು ತನ್ನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಗಂಡನ ಹತ್ಯೆ ಮಾಡುವ ಬಗ್ಗೆ ಹಂತಕರಿಗೆ ಮಾಹಿತಿ ನೀಡಿ ಕೊಲೆಯಲ್ಲಿ ಪಾಲ್ಗೊಂಡಿರುವ ವಿಷಯ ಇದೀಗ ಬಯಲಾಗಿದೆ.
ವಡೇರಟ್ಟಿ ಗ್ರಾಮದ ಶಂಕರ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಹತ್ಯೆಗೀಡಾದ ಶಂಕರ ಜಗಮುತ್ತಿ ಅವರ ಪತ್ನಿ ಸಿದ್ದವ್ವ ಆಲಿಯಾಸ್ ಪ್ರಿಯಾಂಕ ಜಗಮುತ್ತಿ ( 21 ) ಮತ್ತು ಆಕೆಯ ಸ್ನೇಹಿತ ಬೈರನಟ್ಟಿ ಗ್ರಾಮದ ಶ್ರೀಧರ ತಳವಾರ (22) ಘಟನೆ ಈಗ ಕೊಲೆ ಆರೋಪದಲ್ಲಿ ಬಂಧಿತರಾಗಿದ್ದಾರೆ.
ಭೀಮನ ಅಮಾವಾಸ್ಯೆ ಪೂಜೆಗೆ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕಾ ಜೊತೆಗೆ ಶಂಕರ ಜಗಮುತ್ತಿ ಬಂದಿದ್ದ. ದೇವರ ದರ್ಶನ ಪಡೆದ ನಂತರ ವಾಪಸ್ ಹೋಗುತ್ತಿದ್ದ ವೇಳೆ ದೇವಸ್ಥಾನದ ಬಳಿ ಶ್ರೀಧರ ತಳವಾರ ಲಾಂಗ್ ನಿಂದ ಆತನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಪತ್ನಿ ಪ್ರಿಯಾಂಕ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಳು. ಕೊನೆಗೆ ಸಂಶಯದ ಮೇಲೆ ಪೊಲೀಸರು ಶಂಕರನ ಪತ್ನಿ ಪ್ರಿಯಾಂಕಾಳನ್ನು ತೀವ್ರ ವಿಚಾರಣೆ ನಡೆಸಿದಾಗ ಘಟನೆ ಹಿಂದಿನ ಸತ್ಯ ಹೊರಬಿದ್ದಿದೆ.
ಮೂಡಲಗಿ ತಾಲೂಕಿನ ಬೈರನಟ್ಟಿ ಗ್ರಾಮದ ಶ್ರೀಧರ ತಳವಾರ ಮತ್ತು ಪ್ರಿಯಾಂಕಾ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ಪ್ರೀತಿ ಆರನೇ ತರಗತಿಯಲ್ಲೇ ಕುದುರಿತ್ತಂತೆ. ಅದು ಮುಂದುವರಿದಿತ್ತು.
ಏತನ್ಮಧ್ಯೆ ಕುಟುಂಬದ ಹಿರಿಯರು ಶಂಕರ ಮತ್ತು ಪ್ರಿಯಾಂಕ ಅವರ ಮದುವೆ ನಿಶ್ಚಯ ಮಾಡಿದ್ದರು. ನಂತರ ಶಂಕರನೊಂದಿಗೆ 2023ರ ಮಾರ್ಚ್ 19 ರಂದು ವಿವಾಹ ಮಾಡಿದ್ದರು. ಆದರೂ ಸಹಾ ಪ್ರಿಯಾಂಕ ಜಗಮತ್ತಿ ಶ್ರೀಧರನ ಜೊತೆ ಆಗಾಗ ಮಾತುಕತೆ ನಡೆಸುತ್ತಿದ್ದಳಂತೆ.
ಪ್ರಿಯಾಂಕ ತನ್ನ ಜನ್ಮದಿನವನ್ನು ಭಾನುವಾರ ರಾತ್ರಿ ಪತಿ ಶಂಕರನ ಕುಟುಂಬದೊಂದಿಗೆ ಆಚರಿಸಿ ಸಂಭ್ರಮಿಸಿದ್ದಳು. ಭೀಮನ ಅಮಾವಾಸ್ಯೆ ಮತ್ತು ಬನಸಿದ್ದೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಹೋಗಿ ಬರಲು ಸಿದ್ಧವಾಗಿರುವಂತೆ ಶಂಕರ ಜಗಮುತ್ತಿ ಪತ್ನಿಗೆ ಹೇಳಿದ್ದ.
ಆದರೆ ಪ್ರಿಯಾಂಕ ಮೊದಲೇ ದೇವಸ್ಥಾನಕ್ಕೆ ಬರುವ ವಿಷಯವನ್ನು ಪ್ರಿಯಕರ ಶ್ರೀಧರನಿಗೆ ತಿಳಿಸಿದ್ದಳು. ಶಂಕರನೊಂದಿಗೆ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದಿದ್ದಾಳೆ. ವಾಪಾಸ್‌ ಬರುವಾಗ ಪತಿಗೆ ದ್ವಿಚಕ್ರ ವಾಹನ ತರುವಂತೆ ತಿಳಿಸಿ ವೇಗವಾಗಿ ನಡೆದುಕೊಂಡು ದೇವಸ್ಥಾನದ ಹೊರಬಂದು ನಿಂತಿದ್ದಾಳೆ. ಆಗ ಶ್ರೀಧರ ದೇವಸ್ಥಾನದ ಬಳಿ ಹೋಗಿ ಲಾಂಗ್ ನಿಂದ ಶಂಕರ ಜಗಮತ್ತಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಪ್ರಿಯಾಂಕಾ ರೋದಿಸುವ ನಾಟಕವಾಡಿದ್ದಾಳೆ. ಆದರೆ ಈಕೆಯ ಬಗ್ಗೆ ಅನುಮಾನ ಬಂದ ಪೊಲೀಸರು ಕೊನೆಗೂ ವಿಚಾರಣೆ ನಡೆಸಿದಾಗ ಘಟನೆ ಹಿಂದೆ ಶ್ರೀಧರ ಮತ್ತು ಆಕೆ ಇರುವುದು ಗೊತ್ತಾಗಿದೆ. ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್, ಟೆಕ್ನಿಕಲ್ ಸಾಕ್ಷ್ಯ ಆಧರಿಸಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಶ್ರೀಧರ್​ನನ್ನು ಬಂಧಿಸಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement