ಮುಂಬೈ: ಗುರುವಾರ ಮುಂಜಾನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 48 ಕುಟುಂಬಗಳ ಮೇಲೆ ಇದು ಪರಿಣಾಮ ಬೀರಿವೆ.
ಮುಂಬೈನಿಂದ 80 ಕಿಮೀ ದೂರದಲ್ಲಿರುವ ಖಲಾಪುರ್ ತಹಸಿಲ್‌ನ ಇರ್ಶಲ್ವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಬಳಿಕ ಈ ಘಟನೆ ನಡೆದಿದೆ
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರ ಭರಿಸಲಿದೆ ಎಂದೂ ಅವರು ಹೇಳಿದ್ದಾರೆ. ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತದಿಂದ ಅವಶೇಷಗಳು 15 ರಿಂದ 20 ಅಡಿಗಳಷ್ಟು ಏರಿವೆ ಎಂದು ಅವರು ಹೇಳಿದರು.
ಎರಡು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. ರಾಯಗಡದ ಖಲಾಪುರ್ ತಹಸಿಲ್‌ನ ಇರ್ಶಲವಾಡಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, 48 ಕುಟುಂಬಗಳಿಗೆ ಹಾನಿಯಾಗಿದೆ.
ಪೊಲೀಸರ ಪ್ರಕಾರ, ಅವಶೇಷಗಳಿಂದ 12 ಮೃತದೇಹಗಳನ್ನು ಪಡೆಯಲಾಗಿದೆ. ಇದಲ್ಲದೆ, ಒಬ್ಬ ರಕ್ಷಕನು ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಾನೆ.
ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಏಕನಾಥ ಶಿಂಧೆ ಸ್ಥಳಕ್ಕೆ ಆಗಮಿಸಿದ್ದಾರೆ.
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭೂಕುಸಿತದಿಂದ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು. ಈ ಘಟನೆಯ ಬಗ್ಗೆ ತಿಳಿದ ನಂತರ ನಾನು ನಿನ್ನೆ ರಾತ್ರಿಯಿಂದ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೆ, ಎನ್‌ಡಿಆರ್‌ಎಫ್‌ನ ಎರಡು ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದ್ದು, ಇನ್ನೂ ಎರಡು ತಂಡಗಳು ಶೀಘ್ರದಲ್ಲೇ ತಲುಪಲಿವೆ ಎಂದು ಅವರು ಹೇಳಿದರು. ಭಾರೀ ಮಳೆ ಮತ್ತು ಕತ್ತಲೆಯು ಆರಂಭದಲ್ಲಿ ಪರಿಹಾರ ಕಾರ್ಯಕ್ಕೆ ಅಡ್ಡಿಯಾಯಿತು, ಆದರೆ ಈಗ ಅದು ವೇಗವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. “ಪ್ರಾಥಮಿಕ ಮಾಹಿತಿ ಪ್ರಕಾರ ಇಲ್ಲಿ ಒಟ್ಟು 48 ಕುಟುಂಬಗಳಿವೆ. ಇಲ್ಲಿಯವರೆಗೆ ಸುಮಾರು 75 ಮಂದಿ ಸ್ಥಳಾಂತರಗೊಂಡಿದ್ದು, ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮೃತರ ವಾರಸುದಾರರಿಗೆ ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದ್ದು, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಯುಬಿಟಿ ಸೇನಾ ಶಾಸಕ ಆದಿತ್ಯ ಠಾಕ್ರೆ ಕೂಡ ರಾಯಗಡದಲ್ಲಿ ಭೂಕುಸಿತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಸ್ಥಳದ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ನಾವು ಗ್ರಾಮಸ್ಥರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ, ಆದರೆ ಅಲ್ಲಿಗೆ ತಲುಪಲು ಕಷ್ಟವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ನಾವು ನಂತರ ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತೇವೆ. ಆದರೆ ನಾವು ಮೊದಲು ಜೀವಗಳನ್ನು ಉಳಿಸಬೇಕಾಗಿರುವುದರಿಂದ ನಾವು ಸದ್ಯಕ್ಕೆ ರಕ್ಷಣಾ ಕಾರ್ಯಾಚರಣೆಗಳತ್ತ ಗಮನ ಹರಿಸುತ್ತೇವೆ” ಎಂದು ಅವರು ಹೇಳಿದರು. ಮಹಾರಾಷ್ಟ್ರದ ಸಚಿವರಾದ ಉದಯ್ ಸಾಮಂತ್ ಮತ್ತು ದಾದಾ ಭೂಸೆ ಅವರು ರಾಯಗಡದ ಖಲಾಪುರದ ಇರ್ಶಲವಾಡಿಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ