ಪಾಕಿಸ್ತಾನದಲ್ಲಿ ರಾಜಕೀಯ ಸಭೆಯಲ್ಲಿ ಬಾಂಬ್‌ ಸ್ಫೋಟ : ಕನಿಷ್ಠ 40 ಮಂದಿ ಸಾವು, 130ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ : ಭಾನುವಾರ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ರಾಜಕೀಯ ಪಕ್ಷದ ಸಭೆಯೊಂದರಲ್ಲಿ ಆತ್ಮಹತ್ಯಾ ಬಾಂಬರ್ ಪ್ರಬಲ ಬಾಂಬ್‌ ಸ್ಫೋಟಿಸಿದಾಗ ಕನಿಷ್ಠ 40 ಜನರು ಸಾವಿಗೀಡಾಗಿದ್ದಾರೆ ಮತ್ತು 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಬಜೌರ್‌ನ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಅಲ್ಲಿ 400 ಕ್ಕೂ ಹೆಚ್ಚು ಪಕ್ಷದ ಸದಸ್ಯರು ಉಪಸ್ಥಿತರಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಾಗಿರುವುದರಿಂದ ಸಾವು ಇನ್ನೂ ಹೆಚ್ಚಾಗಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಂಭೀರ ಗಾಯಾಳುಗಳನ್ನು ಉತ್ತಮ ವೈದ್ಯಕೀಯ ಆರೈಕೆಗಾಗಿ ಪ್ರಾಂತೀಯ ರಾಜಧಾನಿ ಪೇಶಾವರಕ್ಕೆ ವಿಮಾನದಲ್ಲಿ ಸಾಗಿಸಲಾಗುತ್ತಿದೆ ಎಂದು ಸರ್ಕಾರಿ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು ಜಾರಿ ಸಂಸ್ಥೆಗಳು ಪ್ರದೇಶವನ್ನು ಸುತ್ತುವರಿದಿವೆ. ಐದು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಿವೆ ಎಂದು ರಕ್ಷಣಾ ವ್ಯಕ್ತಿಯೊಬ್ಬರು ಈ ಹಿಂದೆ ತಿಳಿಸಿದ್ದರು.
ಮೌಲಾನಾ ಫಜ್ಲುರ್ ರೆಹಮಾನ್ ಪಕ್ಷದ ಸ್ಥಳೀಯ ಮುಖ್ಯಸ್ಥ ಮೌಲಾನಾ ಜಿಯಾವುಲ್ಲಾ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ. ಅಬ್ದುರ್ ರಶೀದ್ ಮತ್ತು ಮಾಜಿ ಶಾಸಕ ಮೌಲಾನಾ ಜಮಾಲುದ್ದೀನ್ ಅವರಂತಹ ಇತರ ನಾಯಕರು ವೇದಿಕೆಯಲ್ಲಿದ್ದರು. ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪಕ್ಷದ ವರಿಷ್ಠ ರೆಹಮಾನ್ ರ್ಯಾಲಿಯಲ್ಲಿ ಇರಲಿಲ್ಲ ಎಂದು ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ.
70 ವರ್ಷದ ರೆಹಮಾನ್ ಅವರನ್ನು ತಾಲಿಬಾನ್ ಪರ ಧರ್ಮಗುರು ಎಂದು ಪರಿಗಣಿಸಲಾಗಿದೆ ಮತ್ತು ಅವರ ರಾಜಕೀಯ ಪಕ್ಷವು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಭಾಗವಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಬಲಿಗರನ್ನು ಸಜ್ಜುಗೊಳಿಸಲು ರಾಜಕೀಯ ರ್ಯಾಲಿಗಳನ್ನು ಆಯೋಜಿಸಲಾಗಿತ್ತು.
ದಾಳಿಯ ಹೊಣೆಯನ್ನು ಈವರೆಗೆ ಯಾರೂ ಹೊತ್ತುಕೊಂಡಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement