ಹರ್ಯಾಣದ ನುಹ್, ಗುರುಗ್ರಾಮದಲ್ಲಿ ಗುಂಪು ಘರ್ಷಣೆಯಲ್ಲಿ ಇಮಾಮ್ ಸೇರಿದಂತೆ 5 ಸಾವು

ನವದೆಹಲಿ: ಹರ್ಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಧಾರ್ಮಿಕ ಮೆರವಣಿಗೆ ವೇಳೆ ಸೋಮವಾರ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು, ಒಬ್ಬ ನಾಗರಿಕ ಮತ್ತು ಇಮಾಮ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಮಾತನಾಡಿ, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಘರ್ಷಣೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ನುಹ್ ಜಿಲ್ಲೆ ಮತ್ತು ಸಮೀಪದ ಪ್ರದೇಶಗಳಲ್ಲಿ ಭಾರೀ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಖಟ್ಟರ್ ಹೇಳಿದರು. ನುಹ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಅವರು ಹೇಳಿದರು.
ಸುಮಾರು 44 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 70 ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಇದುವರೆಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನಾವು ಅವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತೇವೆ. ನಾನು ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆ ಎಂದು ಖಟ್ಟರ್ ಹೇಳಿದ್ದಾರೆ.
ನುಹ್ ಗೋರಖನಾಥ ದೇವಾಲಯದ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದುಷ್ಕರ್ಮಿಗಳು ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ನಡೆಸಿ ದ್ವಿಚಕ್ರ ವಾಹನವನ್ನು ಸುಟ್ಟು ಹಾಕಿದ್ದಾರೆ. ಅರ್ಚಕರ ದೇಹದ ಮೇಲೆ ಮೂಗೇಟುಗಳ ಗುರುತುಗಳಿದ್ದವು. ಕಲ್ಲು ತೂರಾಟಕ್ಕೂ ಮುಂದಾದರು.
ಗುರುಗ್ರಾಮದ ಸೆಕ್ಟರ್ -56 ರಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯ ಹೊರಗೆ ಸೋಮವಾರ ರಾತ್ರಿ ಇಮಾಮ್ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಲಾಯಿತು. ಸುಮಾರು ಮೂರು-ನಾಲ್ಕು ಜನರು ಇಮಾಮ್ ಹಾಗೂ ಮತ್ತೊಬ್ಬರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದರು. ದಾಳಿಯಲ್ಲಿ ಇಮಾಮ್‌ ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕೆಲವು ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ದಾಳಿ ನಡೆದಾಗ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿ ಸುಮಾರು ಐದು ಜನರು ಇದ್ದರು.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಹರ್ಯಾಣದ ನುಹ್‌ನಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಜನಸಮೂಹ ಸೋಮವಾರ ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತು. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಗುರುಗ್ರಾಮ-ಆಳ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಗುಂಪೊಂದು ತಡೆದಿತ್ತು. ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದರಿಂದ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.
ನುಹ್‌ನಲ್ಲಿ ಹಿಂಸಾಚಾರದ ಸುದ್ದಿ ಹರಡುತ್ತಿದ್ದಂತೆ, ಎರಡು ಸಮುದಾಯಗಳ ಪ್ರತಿಭಟನಾಕಾರರು ಗುರುಗ್ರಾಮದ ಸೊಹ್ನಾ ರಸ್ತೆಯ ಬಳಿ ಘರ್ಷಣೆ ನಡೆಸಿದರು, ಇದರ ಪರಿಣಾಮವಾಗಿ ಹಲವಾರು ವಾಹನಗಳಿಗೆ ಹಾನಿಯಾಗಿದೆ. ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದರು.
ಹರಿಯಾಣ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ, “ನೂಹ್, ಸೊಹ್ನಾ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅರೆಸೇನಾ ಪಡೆಗಳ 13 ಕಂಪನಿಗಳು ಅಲ್ಲಿ ನೆಲೆಗೊಂಡಿವೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಕಂಪನಿಗಳು ತಲುಪಲಿವೆ. ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮದಲ್ಲಿ ಯಾವುದೇ ಕರ್ಫ್ಯೂ ವಿಧಿಸಲಾಗಿಲ್ಲ, ಆದಾಗ್ಯೂ, ಈ ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಸೆಕ್ಷನ್ 144 ಅನ್ನು ವಿಧಿಸಲಾಗಿದೆ.
ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ, ಗುರುಗ್ರಾಮ ಮತ್ತು ಫರಿದಾಬಾದ್‌ನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಆಗಸ್ಟ್ 1ರಂದು ಮುಚ್ಚಿವೆ. ಗುರುಗ್ರಾಮ ಮತ್ತು ನುಹ್‌ನಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ನುಹ್ ಜಿಲ್ಲೆಯಲ್ಲಿ ಬುಧವಾರ, ಆಗಸ್ಟ್ 2 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.
ನುಹ್‌ನಲ್ಲಿ ಘರ್ಷಣೆ ಭುಗಿಲೆದ್ದಿದ್ದರಿಂದ ಶಿವ ದೇವಾಲಯದಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement