ಜ್ಞಾನವಾಪಿ ಮಸೀದಿ ಆವರಣದ ಎಎಸ್‌ಐ ಸರ್ವೆಗೆ ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜ್ಞಾನವಾಪಿ ಮಸೀದಿಯ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್‌ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದ ಆದೇಶ ಹೊರಬಿದ್ದಿದೆ.
ಎಎಸ್‌ಐ (ASI) ಸಂಪೂರ್ಣ ಪ್ರಕ್ರಿಯೆಯಲ್ಲಿ ಮಸೀದಿ ಆವರಣದಲ್ಲಿ ಯಾವುದೇ ಉತ್ಖನನವನ್ನು ಅನುಮತಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, .
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು. ಈ ಹಂತದಲ್ಲಿ ಈ ವಿಚಾರದಲ್ಲಿ ಏಕೆ ಮಧ್ಯಪ್ರವೇಶಿಸಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಎಎಸ್‌ಐ (ASI) ಇತಿಹಾಸಕ್ಕೆ ಹೋಗಲು ಉದ್ದೇಶಿಸಿದೆ ಮತ್ತು ಅದು “ಹಿಂದಿನ ಗಾಯಗಳನ್ನು ಮತ್ತೆ ತೆರೆದುಕೊಳ್ಳುವಂತೆ ಮಾಡುತ್ತದೆ ಎಂದು ಮುಸ್ಲಿಂ ಸಂಸ್ಥೆ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿ ವಾದಿಸಿತು. ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಪ್ರಕ್ರಿಯೆಯು “ಇತಿಹಾಸವನ್ನು ಅಗೆಯುತ್ತಿದೆ”, ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲಂಘಿಸುತ್ತಿದೆ ಮತ್ತು ಭ್ರಾತೃತ್ವ ಮತ್ತು ಜಾತ್ಯತೀತತೆಗೆ ಧಕ್ಕೆ ತರುತ್ತಿದೆ ಎಂದು ವಾದಿಸಿದರು. ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991, 1947ರಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುತ್ತದೆ. ಆರಾಧನಾ ಸ್ಥಳಗಳ ಕಾಯಿದೆಯ ನಿಬಂಧನೆಗಳಿಂದಾಗಿ ಸಮೀಕ್ಷೆಗೆ ಆದೇಶ ನೀಡಬಾರದು ಎಂದು ಮುಸ್ಲಿಂಪಕ್ಷದವರು ವಾದಿಸಿದರು.
ಮುಸ್ಲಿಂ ಪಕ್ಷದ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ಯಾವುದೇ ಆಕ್ರಮಣಕಾರಿ ತಂತ್ರವನ್ನು ಆಶ್ರಯಿಸದೆ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಎಎಸ್‌ಐಗೆ ನ್ಯಾಯಾಲಯ ಸೂಚಿಸಿದೆ ಎಂದು ಹೇಳಿತು. ಹಾಗೂ ಎಎಸ್‌ಐ ಅಂತಿಮ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಇರಿಸಲು ಮಸೀದಿ ಆಡಳಿತ ಸಮಿತಿಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement