ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ತಯಾರಿಸಿದ ವೃದ್ಧ ದಂಪತಿ : ಅದರ ತೂಕ, ಗಾತ್ರ ನೋಡಿದ್ರೆ ಶಾಕ್ ಆಗ್ಬೇಕು

ಅಲಿಘರ್‌ನ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ 400 ಕೆಜಿ ತೂಕದ ಬೀಗವನ್ನು ಸಿದ್ಧಪಡಿಸಿದ್ದಾರೆ, ಶ್ರೀರಾಮ ಮಂದಿರವು ಜನವರಿ 2024ರಲ್ಲಿ ಭಕ್ತರಿಗೆ ತೆರೆಯುವ ನಿರೀಕ್ಷೆಯಿದೆ.
ಭಗವಾನ್ ರಾಮನ ಭಕ್ತ, ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾದ ಸತ್ಯಪ್ರಕಾಶ ಶರ್ಮಾ ಅವರು “ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಲಾಕ್” ಅನ್ನು ತಯಾರಿಸಲು ತಿಂಗಳುಗಟ್ಟಲೆ ಶ್ರಮಿಸಿದರು. ಈ ದೈತ್ಯ ಬೀಗವು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಾಗಿದ್ದು ಇದರ ಚಾವಿಯೇ 4 ಅಡಿ ಉದ್ದವಿದೆ.
ಬೀಗವನ್ನು ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿರುವುದರಿಂದ ಶರ್ಮಾ ಅವರು ತಮ್ಮ ಜೀವ ಉಳಿತಾಯವನ್ನು ಇದರಲ್ಲಿ ಬಳಸಿದ್ದಾರೆ.
“ನಾನು ದಶಕಗಳಿಂದ ಬೀಗ ತಯಾರಿಸುವ ವ್ಯವಹಾರದಲ್ಲಿ ಇದ್ದೇನೆ, ನಮ್ಮ ನಗರವು ಬೀಗಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಹಿಂದೆ ಯಾರೂ ಈ ರೀತಿ ಮಾಡಿಲ್ಲವಾದ್ದರಿಂದ ದೇವಸ್ಥಾನಕ್ಕೆ ದೈತ್ಯ ಬೀಗವನ್ನು ಮಾಡಲು ನಾನು ಯೋಚಿಸಿದೆ” ಎಂದು ಅವರು ತಿಳಿಸಿದ್ದಾರೆ.
ಇದು ನನಗೆ “ಪ್ರೀತಿಯ ಶ್ರಮ”. ನನ್ನ ಹೆಂಡತಿ ರುಕ್ಮಣಿ ಕೂಡ ಈ ಸಾಹಸದಲ್ಲಿ ನನಗೆ ಸಹಾಯ ಮಾಡಿದರು ಎಂದು ಅವರು ಹೇಳಿದರು.
ಈ ವರ್ಷದ ಕೊನೆಯಲ್ಲಿ ರಾಮ ಮಂದಿರದ ಅಧಿಕಾರಿಗಳಿಗೆ ವಿಶಿಷ್ಟವಾದ ಬೀಗವನ್ನು ಉಡುಗೊರೆಯಾಗಿ ನೀಡಲು ಶರ್ಮಾ ಯೋಜಿಸಿದ್ದಾರೆ.
ಈ ಈ ವರ್ಷದ ಆರಂಭದಲ್ಲಿ ವಾರ್ಷಿಕ ಅಲಿಗಢ್ ಪ್ರದರ್ಶನದಲ್ಲಿ ಬೀಗವನ್ನು ಪ್ರದರ್ಶಿಸಲಾಯಿತು ಮತ್ತು ಸಣ್ಣ ಮಾರ್ಪಾಡುಗಳನ್ನು ಮಾಡುವಲ್ಲಿ ನಿರತರಾಗಿರುವ ಶರ್ಮಾ, ಇದು ಪರಿಪೂರ್ಣವಾಗಬೇಕೆಂದು ಬಯಸುವುದಾಗಿ ಹೇಳಿದ್ದಾರೆ. ಎಲ್ಲಿ ಬೀಗ ಹಾಕಬಹುದು ಎಂಬುದನ್ನು ನೋಡಬೇಕಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ಅವರು ತಮ್ಮ ಕುಟುಂಬವು ಒಂದು ಶತಮಾನಕ್ಕೂ ಹೆಚ್ಚು ಕಾಲ ಕೈಯಿಂದ ಮಾಡಿದ ಬೀಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ ಮತ್ತು ತಾವು 45 ವರ್ಷಗಳಿಂದ ಈ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಮುಂದಿನ ವರ್ಷ ಜನವರಿ 21, 22 ಮತ್ತು 23 ರಂದು ಅಯೋಧ್ಯೆಯ ರಾಮಮಂದಿರದ ಪವಿತ್ರೀಕರಣ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಕಳುಹಿಸಲಾಗುವುದು ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಶುಕ್ರವಾರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಕಾಶ್ಮೀರದ ಶ್ರೀನಗರದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement