ಜರ್ಮನ್ ನಗರದಲ್ಲಿ ವಿಶ್ವ ಮಹಾಯುದ್ಧ-IIರ ಬೃಹತ್‌ ಬಾಂಬ್ ಪತ್ತೆ : 13,000 ಜನರ ಸ್ಥಳಾಂತರ

ಜರ್ಮನಿಯ ಡಸೆಲ್ಡಾರ್ಫ್‌ (Dusseldorf) ನಗರದಲ್ಲಿ ಎರಡನೇ ವಿ‍ಶ್ವ ಮಹಾಯುದ್ಧದ ಬೃಹತ್ ಬಾಂಬ್‌ (World War II bomb) ಪತ್ತೆಯಾಗಿದೆ. ಹೀಗಾಗಿ ಆ ನಗರದ 13,000 ನಿವಾಸಿಗಳನ್ನು ತಕ್ಷಣ ಅಲ್ಲಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದ ನಗರಡಳಿತವು ಬಾಂಬ್‌ ವಿಲೇವಾರಿಗೆ ಕ್ರಮ ಕೈಗೊಂಡಿದೆ ಎಂದು ಜರ್ಮನ್‌ ಸುದ್ದಿವಾಹಿನಿ ಡ್ಯೂಷ್‌ ವೆಲ್ಲೆ ವರದಿ ಮಾಡಿದೆ.
ನಗರದ ಮೃಗಾಲಯದ ಸಮೀಪ ಆಗಸ್ಟ್ 7-8 ರಂದು ಪತ್ತೆಯಾದ ಸ್ಫೋಟಗೊಳ್ಳದ ಒಂದು ಟನ್ ತೂಕದ ಬಾಂಬ್‌ ಅನ್ನು ವಿಲೇವಾರಿ ಮಾಡಿ ನಿಷ್ಕ್ರಿಯಗೊಳಿಸಲು ಪೊಲೀಸ್‌ ತಂಡ ಮತ್ತು ಬಾಂಬ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿದೆ ಎಂದು ವರದಿ ಹೇಳಿದೆ.
ಡಸೆಲ್ಡಾರ್ಫ್‌ನಲ್ಲಿ, ಬಾಂಬ್‌ ಪತ್ತೆಯಾದ ಸ್ಥಳದಿಂದ 500-ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳನ್ನು ಪ್ರದೇಶ ಬಿಟ್ಟು ದೂರ ಹೋಗುವಂತೆ ಸೂಚಿಸಲಾಗಿದೆ. ಬಾಂಬ್‌ ವಿಲೇವಾರಿ ಕಾರ್ಯಾಚರಣೆ ವೇಳೆ ತೆರವು ಮಾಡುವತ್ತಿರುವ ಪ್ರದೇಶದ ವ್ಯಾಪ್ತಿಯ ರಸ್ತೆಗಳನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಯಿತು.
ಕೆಲವು ನಿವಾಸಿಗಳು ತಮ್ಮ ಮನೆಗಳನ್ನು ತೊರೆದಾಗ ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಹೊತ್ತೊಯ್ದರು. ಆದಾಗ್ಯೂ, ವಿಲೇವಾರಿ ಯಾವಾಗ ಪೂರ್ಣಗೊಂಡಿತು ಮತ್ತು ನಿರ್ಬಂಧಗಳನ್ನು ತೆಗೆದುಹಾಕಲಾಯಿತು ಎಂಬ ಅಂಶ ವರದಿಯಲ್ಲಿ ಸ್ಪಷ್ಟವಾಗಿ ನೀಡಿಲ್ಲ.
ಫ್ರಾಂಕ್‌ಫರ್ಟ್‌ನಲ್ಲಿ 2017 ರಲ್ಲಿ 1.4 ಟನ್ ಬಾಂಬ್ ಪತ್ತೆಯಾಗಿತ್ತು. ಅಂದು ಅಲ್ಲಿದ್ದ 65,000 ಜನರನ್ನು ಸ್ಥಳಾಂತರಿಸಲಾಯಿತು. 2021ರ ಡಿಸೆಂಬರ್‌ನಲ್ಲಿ ಮ್ಯೂನಿಚ್ ನಿಲ್ದಾಣ ಸಮೀಪದ ನಿರ್ಮಾಣ ಸ್ಥಳದಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಸ್ಫೋಟಗೊಂಡಿತು. ಸ್ಫೋಟದಿಂದಾಗಿ ನಾಲ್ವರು ಗಾಯಗೊಂಡಿದ್ದರು.
ಅಮೆರಿಕ ಮತ್ತು ಬ್ರಿಟಿಷ್ ವಾಯುಪಡೆಗಳು ಯುರೋಪ್ ಮೇಲೆ 2.7 ಮಿಲಿಯನ್ ಟನ್ ಬಾಂಬುಗಳನ್ನು ಬೀಳಿಸಿತು- ಅದರಲ್ಲಿ ಅರ್ಧದಷ್ಟು 1940 ಮತ್ತು 1945 ರ ನಡುವೆ ಜರ್ಮನಿಯ ಮೇಲೆ ಬೀಳಿಸಲಾಗಿತ್ತು ಎಂದು ಸ್ಮಿತ್ಸೋನಿಯನ್ ಮ್ಯಾಗಜೀನ್ ವರದಿ ಮಾಡಿದೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement