ಮೀರತ್ : 3 ಹೆಣ್ಣು ಮಕ್ಕಳ ತಂದೆ ತನ್ನ ಗೆಳತಿಯನ್ನು ಮದುವೆಯಾಗಲು ಏಳು ಸಮುದ್ರಗಳನ್ನು ದಾಟಿ ಮೀರತ್ ತಲುಪಿದ ನಂತರ ಹುಡುಗಿಯ ಸಂಬಂಧಿಕರು ಆತನ ಮೇಲೆ ಪೊಲೀಸ್ ದೂರು ನೀಡಿದ ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಗುಪ್ತಚರ ದಳ ಆತನ ವಿಚಾರಣೆ ನಡೆಸುತ್ತಿದೆ.
ಫಿಜಿಯ ಕಂಪ್ಯೂಟರ್ ಎಂಜಿನಿಯರ್ ಸೈಯದ್ ಫಜಲ್ ಆನ್ಲೈನ್ ನಲ್ಲಿ ಸಂಪರ್ಕಕ್ಕೆ ಬಂದ ತನ್ನ ಗೆಳತಿಯನ್ನು ಮದುವೆಯಾಗುವ ಉದ್ದೇಶದಿಂದ ಉತ್ತರ ಪ್ರದೇಶದ ಮೀರತ್ತಿಗೆ ಆಗಮಿಸಿದರು. ಆದರೆ ಸಂದರ್ಭವು ದುಃಖಕರ ತಿರುವನ್ನು ಪಡೆಯಿತು. ಹುಡುಗಿಯ ಕುಟುಂಬದಿಂದ ಫಜಲ್ ಮೇಲೆ ಹಲ್ಲೆ ನಡೆಯಿತು, ನಂತರ ದೌರ್ಜನ್ಯದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದರು.
ಸದ್ಯ ಪೊಲೀಸರು ಆತನ ಪಾಸ್ಪೋರ್ಟ್, ವೀಸಾ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಮೀರತ್ತಿಗೆ ಬಂದ ಆತನ ಪ್ರಯಾಣದ ವಿವರಗಳನ್ನು ಮತ್ತು ಹುಡುಗಿಯೊಂದಿಗಿನ ಆತನ ಸಂವಹನದ ಸ್ವರೂಪ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಫಿಜಿಯ ಸೈಯದ್ ಫಜಲ್ ಮೀರತ್ತಿನ ರಸುಲ್ಪುರ ಧೋಲ್ಡಿಯ ಹುಡುಗಿಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಕ್ಕೆ ಬಂದಿದ್ದ. ಆರಂಭಿಕ ಸಂವಹನವು ಚಾಟಿಂಗಿಗೆ ಸೀಮಿತವಾಗಿತ್ತು, ಇದು ಅಂತಿಮವಾಗಿ ಪ್ರಣಯದ ಸ್ವರೂಪವಾಗಿ ಮಾರ್ಪಟ್ಟಿತು ಎಂದು ವರದಿಗಳು ತಿಳಿಸಿವೆ. ಇಬ್ಬರು ಮದುವೆಯ ಬಗ್ಗೆ ನಿರ್ಧಾರಕ್ಕೆ ಬಂದರು. ಈ ನಿರ್ಧಾರದ ನಂತರ, ಮಹಿಳೆ ತನ್ನ ಕುಟುಂಬದೊಂದಿಗೆ ವಿಷಯವನ್ನು ಚರ್ಚಿಸಿದಳು, ಅವರು ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡರು. ಈ ಬೆಳವಣಿಗೆಯಿಂದ ಉತ್ತೇಜಿತನಾದ ಫಜಲ್ ಮದುವೆ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಂಡ.
ಫಿಜಿಯಿಂದ ಆಗಮಿಸಿದ ಫಜಲ್ ಬುಧವಾರ ಹುಡುಗಿಯ ನಿವಾಸಕ್ಕೆ ತೆರಳಿದ್ದ. ಹುಡುಗಿಯ ಕುಟುಂದವರನ್ನು ಭೇಟಿಯಾದ ನಂತರ, ಕುಟುಂಬದ ಪ್ರತಿಕ್ರಿಯೆಯು ಆತ ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿತ್ತು.
ಅವರು ಮದುವೆ ಪ್ರಸ್ತಾಪಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದರು ಹಾಗೂ ಮದುವೆ ನಿರ್ಧಾರವನ್ನು ಕೈಬಿಡುವಂತೆ ಸೂಚಿಸಿದರು. ಕುಟುಂಬದ ಪ್ರತಿರೋಧ ಮಧ್ಯೆಯೂ, ಫಜಲ್ ಹುಡುಗಿಯೊಂದಿಗೆ ಒಮ್ಮೆ ಮಾತನಾಡಲು ಅವಕಾಶ ನೀಡುವಂತೆ ಕೇಳಿಕೊಂಡ. ದುರದೃಷ್ಟವಶಾತ್, ಈ ವಿನಂತಿಯು ಕುಟುಂಬವನ್ನು ಕೆರಳಿಸಿತು. ಹಾಗೂ ಅದು ವಾಗ್ವಾದಕ್ಕೆ ಕಾರಣವಾಗಿ, ಹಿಂಸೆಗೆ ತಿರುಗಿತು. ಹುಡುಗಿಯ ಕುಟುಂಬದವರು ಆತನ ಮೇಲೆ ಕಿರುಕುಳದ ಆರೋಪ ಮಾಡಿದರು. ನಂತರ ಪೊಲೀಸರನ್ನು ಕರೆಸಲಾಯಿತು ಮತ್ತು ಫಜಲ್ ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸೈಯದ್ ಫಜಲ್ ತಾನು ಮೊರಾದಾಬಾದ್ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ.
ಆನ್ಲೈನ್ ಸಂಭಾಷಣೆಗಳ ಅವಧಿಯಲ್ಲಿ ಹುಡುಗಿಯೊಂದಿಗಿನ ತನ್ನ ಸಂಬಂಧ ಪ್ರೀತಿಗೆ ತಿರುಗಿದೆ ಎಂದು ಹೇಳಿದ್ದಾನೆ., ಈ ಸಮಯದಲ್ಲಿ ಇಬ್ಬರು ಮದುವೆಯ ಬಗ್ಗೆ ಚರ್ಚಿಸಿದರು. ಹುಡುಗಿ ತನ್ನ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿ ಸಮಾರಂಭಕ್ಕೆ ವ್ಯವಸ್ಥೆ ಮಾಡಲು ತಿಳಿಸಿದ್ದಾಳೆ ಎಂದು ಹೇಳಿದ್ದಾನೆ.
ಫಜಲ್ ಕೆಲ ತಿಂಗಳ ಹಿಂದೆ ಪತ್ನಿಯಿಂದ ಬೇರ್ಪಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಮರುಮದುವೆಯಾಗಲು ಬಯಸಿದ್ದ ತಾನು ಇದಕ್ಕಾಗಿ ತನ್ನ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಾಯ ಕೋರಿದ್ದ. ಕಂಪನಿಯ ಇನ್ನೊಬ್ಬ ಉದ್ಯೋಗಿಯು ಹುಡುಗಿಯ ಕುಟುಂಬದೊಂದಿಗೆ ಸಂಪರ್ಕ ಸುಗಮಗೊಳಿಸಿದ ಎಂದು ಆತ ಹೇಳಿದ್ದಾನೆ.
ಫಿಜಿ ಮೂಲದ ಸೈಯದ್ ಫಜಲ್ ಈಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸದ್ಯ ಆತನ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕುವ ಹಾಗೂ ದಾಖಲೆಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ಸಮಯದಲ್ಲಿ, ಉದ್ದೇಶಿತ ಮದುವೆಯ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡುತ್ತಿದ್ದಾರೆ. ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ