ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಿದ್ದ, ಭಾರತದಲ್ಲಿ ದಾಳಿ ನಡೆಸುವುದನ್ನು ಸಂಘಟಿಸಿದ್ದ : ವರದಿಗಳು

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ಘರ್ಷಣೆಯ ಕೇಂದ್ರಬಿಂದುವಾಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಮತ್ತು ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ನೆರವು ನೀಡಿದ್ದ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ ದಸ್ತಾವೇಜು ಹೇಳುತ್ತದೆ ಎಂದು ವರದಿಗಳು ತಿಳಿಸಿವೆ.
ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ನಿಜ್ಜರ್ ಕೊಲ್ಲಲ್ಪಟ್ಟ. ಈ ವಾರದ ಆರಂಭದಲ್ಲಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇದೇ ಹಿನ್ನೆಲೆಯಲ್ಲಿ ಕೆನಡಾವು ಭಾರತದ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿತು, ಇದು ರಾಜತಾಂತ್ರಿಕನನ್ನು ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿ ಎಂದು ಸಾರ್ವಜನಿಕವಾಗಿ ಎಂದು ಹೆಸರಿಸಿತು. ಭಾರತವು ಇದಕ್ಕೆ ಬಲವಾಗಿ ಪ್ರತಿಕ್ರಿಯಿಸಿದೆ, ಟ್ರೂಡೊ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಭಾರತ ಕೆನಡಾದ ಗುಪ್ತಚರ ಅಧಿಕಾರಿ ಎಂದು ತಿಳಿದುಕೊಂಡಿರುವ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದೆ, ಕೆನಡಿಯನ್ನರಿಗೆ ವೀಸಾ ಸೇವೆಯನ್ನು ಅಮಾನತುಗೊಳಿಸಿದೆ ಮತ್ತು ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡಲು ಆದೇಶಿಸಿದೆ.
ನಿಜ್ಜರ್ ಖಲಿಸ್ತಾನ್ ಆಂದೋಲನದ ಭಾಗವಾಗಿರುವ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿದ್ದ. ಕೆನಡಾದ ನೆಲದಿಂದ ಪ್ರತ್ಯೇಕತಾವಾದಿ ರಾಜಕೀಯ, ಸಂಘಟಿತ ಅಪರಾಧ ಮತ್ತು ಭಯೋತ್ಪಾದಕ ಪಿತೂರಿಗಳಂತಹ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವ ಖಲಿಸ್ತಾನಿ ಅಂಶಗಳ ಬಗ್ಗೆ ಕೆನಡಾದ ಉದಾಸೀನತೆಯಿಂದಾಗಿ ಭಾರತ-ಕೆನಡಾ ಸಂಬಂಧಗಳು ಹದಗೆಟ್ಟಿವೆ. ಟ್ರೂಡೊ ಅವರು ಕೆನಡಾದ ಪ್ರಧಾನಿಯಾದ ನಂತರ ಅವರು, ಅವರ ಸರ್ಕಾರ ಮತ್ತು ಅವರ ಮಿತ್ರಪಕ್ಷಗಳು ಈ ಉಗ್ರಗಾಮಿ ಅಂಶಗಳ ಚಟುವಟಿಕೆಗಳಿಗೆ ವಿಪರೀತ ಸಹಿಷ್ಣುತೆ ತೋರಿದ್ದರಿಂದ ಸಂಬಂಧಗಳು ಮತ್ತಷ್ಟು ಹಳಸುವಂತಾಗಿದೆ.

ನಿಜ್ಜರ್ ಭಾರತದಲ್ಲಿ ದಾಳಿಗಳ ನಡೆಸುವಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಸಹ ಆಯೋಜಿಸಿದ್ದ ಎಂಬ ವರದಿಗಳು ಹೊರಬಿದ್ದಿವೆ. ಈ ಹಿಂದೆ ನಿಜ್ಜರ್ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸುವ ವೀಡಿಯೊಗಳು ಹೊರಬಿದ್ದಿದ್ದವು.
ಖಲಿಸ್ತಾನ್ ಆಂದೋಲನವು ಸಿಖ್ಖರಿಗೆ ಖಲಿಸ್ತಾನ್ ಎಂಬ ಪ್ರತ್ಯೇಕ ರಾಷ್ಟ್ರದ ರಚನೆಯ ಬಗ್ಗೆ ಉಲ್ಲೇಖಿಸುತ್ತದೆ, ಈ ಚಳುವಳಿಯ ಬೆಂಬಲಿಗರು ಭಾರತದಿಂದ ಪ್ರತ್ಯೇಕವಾಗಲು ಬಯಸುತ್ತಾರೆ. ದಶಕಗಳ ಕಾಲ, ಚಳುವಳಿಯು ಭಾರತದಲ್ಲಿ ರಕ್ತಸಿಕ್ತ ದಂಗೆಯನ್ನು ನಡೆಸಿತು, ಅದು ಅಂತಿಮವಾಗಿ 1990 ರ ದಶಕದಲ್ಲಿ ಕಡಿಮೆಯಾಯಿತು. 1990 ರ ದಶಕದಲ್ಲಿ ಭಾರತದಲ್ಲಿ ದಂಗೆಯು ಕಡಿಮೆಯಾದಾಗ, ಆಂದೋಲನವು ವಿದೇಶಗಳಲ್ಲಿ ಉಪಸ್ಥಿತಿ ಪಡೆಯಿತು, ಉದಾಹರಣೆಗೆ ಇದು ಕೆನಡಾದಲ್ಲಿ ಸುರಕ್ಷಿತ ನೆಲೆಯನ್ನು ಕಂಡುಕೊಂಡಿದೆ. ಅಂತಹ ಸುರಕ್ಷಿತ ನೆಲೆಗಳಿಂದ, ಖಲಿಸ್ತಾನ್ ಚಳವಳಿಯು ಭಾರತದ ವಿರುದ್ಧ ಅಪಪ್ರಚಾರ ಮತ್ತು ದುಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಲೇ ಇದೆ. ಇತ್ತೀಚೆಗೆ, ಖಲಿಸ್ತಾನಿ ಅಂಶಗಳು ಭಾರತೀಯ ‌ ಹೈಕಮಿಷನ್‌ ಮೇಲೆ ಮೇಲೆ ದಾಳಿ ಮಾಡಿವೆ. ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿದ್ದಾರೆ, ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ, ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಕೆನಡಾ, ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದಲ್ಲಿ ಜೂನ್ ತಿಂಗಳಲ್ಲಿ ಮಾನ್ಸೂನ್ ಮಳೆ ಕೊರತೆ : ಹವಾಮಾನ ಇಲಾಖೆ

ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ…
2015 ರಲ್ಲಿ ಕೆಟಿಎಫ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಆಯೋಜಿಸಿದ್ದ ಎಂದು ವರದಿಗಳು ತಿಳಿಸಿವೆ.
ಶಿಬಿರದಲ್ಲಿ ಎಕೆ-47, ಸ್ನೈಪರ್ ರೈಫಲ್ ಮತ್ತು ಪಿಸ್ತೂಲ್‌ಗಳಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಿಜ್ಜರ್ ವಿರುದ್ಧ ಭಾರತೀಯ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ ದಾಖಲೆ ಉಲ್ಲೇಖಿಸಿ, ತರಬೇತಿ ಪಡೆದವರಲ್ಲಿ ಮನದೀಪ್ ಸಿಂಗ್ ಧಲಿವಾಲ್ ಕೂಡ ಸೇರಿದ್ದ, ತರಬೇತಿಯ ನಂತರ, ದಾಳಿ ನಡೆಸಲು ಆತನನ್ನು ಭಾರತಕ್ಕೆ ಕಳುಹಿಸಲಾಯಿತು. ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಜನವರಿ 2016 ರಲ್ಲಿ, ಶಿವಸೇನಾ ನಾಯಕರನ್ನು ಕೊಲ್ಲಲು ಮತ್ತು ರಾಜ್ಯದಲ್ಲಿ ಕೋಮು ಪರಿಸ್ಥಿತಿ ಸೃಷ್ಟಿಸಲು ಧಲಿವಾಲ್ ನನ್ನು ನಿಜ್ಜರ್ ಪಂಜಾಬ್‌ಗೆ ಕಳುಹಿಸಿದ್ದ. ಆದರೆ, ಅದೇ ವರ್ಷದ ಜೂನ್‌ನಲ್ಲಿ ಪಂಜಾಬ್ ಪೊಲೀಸರು ಧಲಿವಾಲ್ ನನ್ನು ಬಂಧಿಸಿದರು. … ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದೆ. ನಿಜ್ಜರ್, ಕೆನಡಾದಲ್ಲಿ ಮನ್‌ದೀಪ್ ಸಿಂಗ್ ಧಲಿವಾಲ್‌ಗೆ ಸಂಬಂಧಿಸಿದ ಮಾಡ್ಯೂಲ್ ಅನ್ನು ಸ್ಥಾಪಿಸಿದ ಆರೋಪಗಳಿವೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

ಭಾರತದಲ್ಲಿನ ದಾಳಿಗಳಲ್ಲಿ ನಿಜ್ಜರ ಪಾತ್ರ
ಧಲಿವಾಲ್ ಮೂಲಕ ವಿಫಲವಾದ ದಾಳಿಯು ನಿಜ್ಜರ್ ಭಾರತವನ್ನು ಗುರಿಯಾಗಿಸಿಕೊಂಡ ಏಕೈಕ ನಿದರ್ಶನವಲ್ಲ. 2010 ರಲ್ಲಿ, ಪಂಜಾಬ್‌ನ ಪಟಿಯಾಲಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ನಿಜ್ಜರ್ ನನ್ನು ಹೆಸರಿಸಲಾಯಿತು, ಇದರಲ್ಲಿ ನಾಲ್ವರು ಗಾಯಗೊಂಡಿದ್ದರು. ಪ್ರಕರಣದಲ್ಲಿ ಬಂಧಿತ ಆರೋಪಿ ರಮಣದೀಪ್ ಸಿಂಗ್ ಎಂಬಾತ ನಿಜ್ಜರ್ “ದಾಳಿ ನಡೆಸಲು ಹಣಕಾಸಿನ ನೆರವು ನೀಡುವಲ್ಲಿ ಭಾಗಿಯಾಗಿದ್ದ” ಎಂದು ಬಹಿರಂಗಪಡಿಸಿದ್ದಾನೆ ಎಂದು ವರದಿ ಹೇಳಿದೆ.
2014 ರಲ್ಲಿ, ನಿಜ್ಜರ್ ಧಾರ್ಮಿಕ ವ್ಯಕ್ತಿ ಬಾಬಾ ಪಿಯಾರಾ ಸಿಂಗ್ ಭನಿಯಾರಾವಾಲಾ ಅವರ ಮೇಲೆ ದಾಳಿ ನಡೆಸಲು ಯೋಜಿಸಿದ್ದ. 2014 ರಲ್ಲಿ, ಕೆನಡಾದ ಪ್ರಜೆಯಾದ ಸುರ್ಜಿತ್ ಸಿಂಗ್ ಕೊಹ್ಲಿ ಎಂಬಾತ ನಿಜ್ಜರನ ಆಜ್ಞೆಯ ಮೇರೆಗೆ ಭಾರತಕ್ಕೆ ಭೇಟಿ ನೀಡಿದ್ದ. ಆತ ಮಾಜಿ ಬಿಕೆಐ ಭಯೋತ್ಪಾದಕ ಪರ್ಮಿಂದರ್ ಸಿಂಗ್ ಎಂಬಾತನನ್ನು ಸಾಮಾಜಿಕ-ಧಾರ್ಮಿಕ ಮುಖ್ಯಸ್ಥ ಬಾಬಾ ಪಿಯಾರಾ ಸಿಂಗ್ ಭನಿಯಾರಾವಾಲಾ ಮತ್ತು ಶಿವಸೇನಾ ನಾಯಕ ಸಂಜೀವ್ ಘನೌಲಿ ಹತ್ಯೆಗೆ ಪ್ರೇರೇಪಿಸಿದ್ದ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ನಿಜ್ಜರ್ ಮಾಡ್ಯೂಲ್ ಅನ್ನು ನಿರ್ಮಿಸಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ, ಇದರಲ್ಲಿ ಇನ್ನೊಬ್ಬ ನಿಯೋಜಿತ ಭಯೋತ್ಪಾದಕ ಅರ್ಷ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲಾ ಭಾಗಿಯಾಗಿದ್ದಾನೆ ಮತ್ತು ಆತ ಭಾರತದಲ್ಲಿ ಹೆಚ್ಚಿನ ಸಂಚಿನಲ್ಲಿ ಭಾಗಿಯಾಗಿದ್ದಾನೆ.
2014 ರಲ್ಲಿ, ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆಸಲು ನಿಜ್ಜರ್ ಯೋಜಿಸಿದ್ದ, ಆದರೆ ಆತನಿಗೆ ಭಾರತವನ್ನು ತಲುಪಲು ಸಾಧ್ಯವಾಗಲಿಲ್ಲ, ಆದ್ದರಿಂದ ಆತ ಪಂಜಾಬ್ ಮೂಲದ ಶಿವಸೇನೆಯ ಮಾಜಿ ಡಿಜಿಪಿ ಮೊಹಮ್ಮದ್ ಇಝಾರ್ ಆಲಂ, ಶಿವಸೇನೆ ನಾಯಕ ನಿಶಾಂತ್ ಶರ್ಮಾ, ಮತ್ತು ಬಾಬಾ ಮನ್ ಸಿಂಗ್ ಪೆಹೋವಾ ವಾಲೆ ಅವರನ್ನು ಗುರಿಯಾಗಿಸಲು ತಮ್ಮ ಮಾಡ್ಯೂಲ್ ಗೆ ನಿರ್ದೇಶಿಸಿದ. 2020 ರಲ್ಲಿ ‘ಪಂಥಿಕ್ ವಿರೋಧಿ ಚಟುವಟಿಕೆಗಳ’ ಆರೋಪ ಹೊತ್ತಿದ್ದ ತಂದೆ-ಮಗನ ಜೋಡಿಯಾದ ಮನೋಹರ ಲಾಲ್ ಅರೋರಾ ಮತ್ತು ಜತೀಂದರ್‌ಬೀರ್ ಸಿಂಗ್ ಅರೋರಾ ಅವರ ಜೋಡಿ ಕೊಲೆ ನಡೆಸಲು ಆತ ಅರ್ಷ್‌ದೀಪ್‌ಗೆ ವಹಿಸಿದ್ದ. ದಾಳಿಯಲ್ಲಿ ಮನೋಹರ್ ಲಾಲ್ ಅವರನ್ನು ನವೆಂಬರ್ 20, 2020 ರಂದು ಬಟಿಂಡಾದಲ್ಲಿನ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು, ಆದರೆ ಅವರ ಮಗ ಅದರಿಂದ ಪಾರಾದರು. ನಿಜ್ಜರ್, ಅವರ ಕೊಲೆಗೆ ಕೆನಡಾದಿಂದ ಹಣವನ್ನು ಕಳುಹಿಸಿದ್ದ ಎಂದು ದಸ್ತಾವೇಜಿನಲ್ಲಿ ಹೇಳಲಾಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೆಂಗಳೂರು : ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದು ಎಕ್ಸ್‌ಬಾಕ್ಸ್ ; ಆದ್ರೆ ಪಾರ್ಸೆಲ್ ನಲ್ಲಿ ಬಂದಿದ್ದು ನಾಗರ ಹಾವು...!

ಪಾಕಿಸ್ತಾನದೊಂದಿಗೆ ನಿಜ್ಜರ ಸಂಪರ್ಕ
ವರದಿಗಳ ಪ್ರಕಾರ ಹರ್ದೀಪ್ ಸಿಂಗ್ ನಿಜ್ಜರ್ ಕೂಡ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ತರಬೇತಿ ಪಡೆದಿದ್ದಾನೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ISI ಖಲಿಸ್ತಾನ್ ಚಳವಳಿಯನ್ನು ಬೆಳೆಸುವಲ್ಲಿ, ಉಳಿಸಿಕೊಳ್ಳುವಲ್ಲಿ ಮತ್ತು ಹರಡುವಲ್ಲಿ ಕೇಂದ್ರ ಸ್ಥಾನ ವಹಿಸಿದೆ. ಪಾಕಿಸ್ತಾನದಲ್ಲಿ ನಿಜ್ಜರ್‌ ಮಾಜಿ ಕೆಟಿಎಫ್ ಮುಖ್ಯಸ್ಥ ಜಗತಾರ್ ಸಿಂಗ್ ತಾರಾನನ್ನು ಭೇಟಿಯಾಗಿದ್ದ, ನಂತರ ನಿಜ್ಜರ್‌ ಕೆಟಿಎಫ್ ಮುಖ್ಯಸ್ಥನಾದ.
ಆತ ಏಪ್ರಿಲ್ 2012 ರಲ್ಲಿ ಬೈಸಾಖಿ ಜಾಥಾ ಸದಸ್ಯರ ಸೋಗಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಮೂಲಗಳ ಪ್ರಕಾರ, ನಿಜ್ಜರನನ್ನು ತಾರಾ ತೀವ್ರಗಾಮಿಯಾಗಿ ಮಾಡಿದ. ಮತ್ತು ಐಎಸ್ಐನಿಂದ ಇದನ್ನು ಮತ್ತಷ್ಟು ಇಂಬುಗೊಳಿಸಲಾಯಿತು, ತಾರಾ 2012 ಮತ್ತು 2013 ರಲ್ಲಿ ಆತನಿಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿ ನೀಡಿದ. ತಾರಾ ನಂತರ ನಿಜ್ಜರ್ KTF ಗೆ ಸೇರಿದ. 2013 ರಲ್ಲಿ ಸಂಘಟನೆಯ ಮುಖ್ಯಸ್ಥನಾದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿ 2013 ಮತ್ತು 2014 ರಲ್ಲಿ ತಾರಾ ಮತ್ತು ISI ಅಧಿಕಾರಿಗಳ ಜೊತೆ KTF ಅನ್ನು ಬಲಪಡಿಸಲು ಮತ್ತು ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಲು ಸಭೆಗಳನ್ನು ನಡೆಸಿದ” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ನಿಜ್ಜಾರ್ ಹತ್ಯೆಯಲ್ಲಿ ಯಾವುದೇ ಸಂಭಾವ್ಯ ಒಳಗೊಳ್ಳುವಿಕೆಯ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಆದಾಗ್ಯೂ, ಟ್ರೂಡೊ ಅದನ್ನು ಪದೇ ಪದೇ ಹೇಳುವುದನ್ನು ಮುಂದುವರೆಸಿದ್ದಾರೆ ಮತ್ತು ಸರ್ಕಾರವು ತನ್ನ ಕೇಮುಗಳಿಗೆ ಬೆಂಬಲಿಸಲು ಮಾನವ ಮತ್ತು ತಾಂತ್ರಿಕ ಗುಪ್ತಚರ ಮಾಹಿತಿ ಹೊಂದಿದೆ ಎಂದು ಹೇಳಿಕೊಂಡಿದೆ. ಕೆನಡಾಕ್ಕೆ ಅಮೆರಿಕ ರಾಯಭಾರಿ ಡೇವಿಡ್ ಕೊಹೆನ್ ಅವರು ‘ಫೈವ್ ಐಸ್’ ಮಿತ್ರ ಕೆನಡಾಕ್ಕೆ ಗುಪ್ತಚರ ಮಾಹಿತಿ ಒದಗಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಐದು ಕಣ್ಣುಗಳು (Five Eyes) ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಅನ್ನು ಒಳಗೊಂಡಿರುವ ಗುಪ್ತಚರ-ಹಂಚಿಕೆ ಮೈತ್ರಿಯಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement