ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ವ್ಯಾಪಾರ- ವಹಿವಾಟು ಸ್ತಬ್ಧ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಇಂದು, ಮಂಗಳವಾರ ಕರೆ ನೀಡಿದ್ದ ʼಬೆಂಗಳೂರು ಬಂದ್ʼಗೆ ರಾಜಧಾನಿ ಸ್ತಬ್ಧಗೊಂಡಿತು.
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಬೆಂಗಳೂರು ಬಂದ್ ಗೆ ಕರೆ ನೀಡಿತ್ತು. ಬಂದ್‌ಗೆ ೫೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲ ಬಡಾವಣೆಗಳಲ್ಲಿ ಅಲ್ಲೊಂದು ಇಲ್ಲೊಂದು ಅಂಗಡಿಗಳು ತೆರೆದಿದ್ದವು. ಆಸ್ಪತ್ರೆ, ಮೆಡಿಕಲ್ ಸ್ಟೋರ್, ತರಕಾರಿ, ಹಾಲು ಅಂಗಡಿಗಳು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಂದ್‌ನಿಂದ ಜನಜೀವನದಲ್ಲಿ ವ್ಯತ್ಯಯವಾಗಿತ್ತು. ಜನ ಸಂಚಾರ ವಿರಳವಾಗಿತ್ತು. ವಾಹನಗಳ ಓಡಾಟವು ಕಡಿಮೆ ಸಹ ಕಡಿಮೆ ಇತ್ತು. ಬೆಳಿಗ್ಗೆ ೬ರಿಂದ ಸಂಜೆ ೬ರ ವರೆಗೆ ನಡೆದ ಬೆಂಗಳೂರು ಬಂದ್ ಶಾಂತಿಯುತವಾಗಿ ನಡೆದಿದೆ. ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ರಾಜ್ಯ ಸಾರಿಗೆ ಬಸ್‌ಗಳ ಓಡಾಟ ಇತ್ತಾದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಿಎಂಟಿಸಿ ಬಸ್‌ಗಳು ಮೆಟ್ರೊ ರೈಲುಸಂಚಾರ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಬಿಜೆಪಿ, ಜೆಡಿಎಸ್, ಆಮ್‌ಆದ್ಮಿ ಪಕ್ಷ ಸಹ ಬಂದ್‌ಗೆ ಬೆಂಬಲ ನೀಡಿದ್ದವು. ಕೆಆರ್ ಮಾರುಕಟ್ಟೆ, ಚಿಕ್ಕಪೇಟೆ, ಅವಿನ್ಯೂ ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಮೆಜೆಸ್ಟಿಕ್, ಗಾಂಧಿನಗರ, ಶಿವಾಜಿನಗರ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ವಾಣಿಜ್ಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಕನ್ನಡ ಚಿತ್ರೋದ್ಯಮ ಬಂದ್‌ಗೆ ಬೆಂಬಲ ನೀಡಿದ್ದರಿಂದ ಎಲ್ಲ ಸಿನಿಮಾ ಥಿಯೇಟರ್, ಮಾಲ್‌ಗಳು ಬಂದ್ ಆಗಿದ್ದವು. ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿತ್ತು.
ಜನ ಮನೆಯಿಂದ ಹೊರಬಂದಿಲ್ಲ. ಬೆಂಗಳೂರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಜನರ ತೀರ ವಿರಳವಾಗಿತ್ತು. ಆದರೆ, ವಿಮಾನನಿಲ್ದಾಣದಲ್ಲಿ ಪರಿಸ್ಥಿತಿ ಮಾಮೂಲಿನಂತಿದ್ದು, ಪ್ರಯಾಣಿಕರು ಎಂದಿನಂತೆ ಸಂಚರಿಸಿದ್ದಾರೆ. ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ವೃತ್ತಗಳು, ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಮೈಸೂರು ಬ್ಯಾಂಕ್ ವೃತ್ತ, ಟೌನ್‌ಹಾಲ್, ಸ್ವತಂತ್ರ ಉದ್ಯಾನವನದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ವತಂತ್ರ ಉದ್ಯಾನವನ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ.

ಪ್ರಮುಖ ಸುದ್ದಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 16 ಕಡೆಗಳಲ್ಲಿ ಎನ್ಐಎ ದಾಳಿ

ಪ್ರತಿಭಟನಾಕಾರರು ವಶಕ್ಕೆ
ಬೆಳಿಗ್ಗೆ ಟೌನ್‌ಹಾಲ್, ಮೈಸೂರು ಬ್ಯಾಂಕ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಸ್ವತಂತ್ರ ಉದ್ಯಾನವನದಲ್ಲಿ ರೈತಪರ ಹೋರಾಟಗಾರರು, ಬಾರುಕೋಲು ಚಳವಳಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೇಣು ಹಾಕಿಕೊಳ್ಳಲು ಯತ್ನಿಸಿದ ಹೋರಾಟಗಾರ….
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟಗಾರರೊಬ್ಬರು ಫ್ರೀಡಂಪಾರ್ಕ್‌ನಲ್ಲಿ ರೈತರ ಹಸಿರು ಶಾಲನ್ನೇ ಬಳಸಿ ನೇಣುಹಾಕಿಕೊಳ್ಳಲು ಯತ್ನಿಸಿದ ಘಟನೆ ನಡೆಯಿತು. ತಕ್ಷಣವೇ ಪೊಲೀಸರು ಅದನ್ನು ತಡೆದು ಆ ವ್ಯಕ್ತಿಯನ್ನು ವಶಕ್ಕೆ ಪಡೆದರು.

ಬೃಹತ್‌ ಮೆರವಣಿಗೆ…
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಜೆಸಿ ರಸ್ತೆಯ ಪುರಭವನದಿಂದ ಫ್ರೀಡಂ ಪಾರ್ಕ್‌ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ: ಮಗಳ ಮದುವೆ ಮಾಡಿಕೊಡಲು ಒಪ್ಪದ್ದಕ್ಕೆ ತಾಯಿ-ಮಗನನ್ನು ಭೀಕರವಾಗಿ ಕೊಲೆ ಮಾಡಿದ ಯುವಕ

ವಾಟಾಳ ಸೇರಿ ಹಲವರು ವಶಕ್ಕೆ…
ತಮಿಳುನಾಡಿಗೆ ಬಿಡಬಾರದೆಂದು ಒತ್ತಾಯಿಸಿ ರಾಜಭವನ ಮುತ್ತಿಗೆ ಚಳುವಳಿ ನಡೆಸಿದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ವಿಧಾನಸೌಧ ಮುಂಭಾಗ ಕನ್ನಡ ಚಳವಳಿ ವಾಟಾಳ ಪಕ್ಷದ ನಾಯಕ ವಾಟಾಳ ನಾಗರಾಜ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ರಾಜಭವನ ಮುತ್ತಿಗೆ ಚಳವಳಿ ವೇಳೆ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲು, ಈ ವೇಳೆ ಅವರು ಹೋರಾಟಗಾರರನ್ನು ವಶಕ್ಕೆ ಪಡೆದರು.
ಹೋರಾಟಗಾರರಾದ ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಕುಮಾರ್ ಸೇರಿ ಇನ್ನಿತರ ಕನ್ನಡ ಪರ ಸಂಘಟನೆಗಳ ನಾಯಕರ ಜೊತೆ ವಾಟಾಳ ನಾಗರಾಜ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು, ಆದರೆ ಮಾರ್ಗ ಮಧ್ಯೆ ಅವರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement