ಇರಾಕ್‌ನ ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 114 ಮಂದಿ ಸಾವು

ಮೋಸುಲ್: ಇರಾಕ್‌ ಉತ್ತರ ಭಾಗದಲ್ಲಿ ಕ್ರೈಸ್ತ ಧರ್ಮೀಯರ ಮದುವೆ ಸಮಾರಂಭದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕಿನ ನಿನೆವಾಹ್ ಪ್ರಾಂತ್ಯದ ಹಂದಾನಿಯಾ ಪ್ರದೇಶದಲ್ಲಿನ ಸಭಾಂಗಣದಲ್ಲಿ ದುರ್ಘಟನೆ ಸಂಭವಿಸಿದೆ. ಮದುವೆ ಹಾಲ್‌ನಿಂದ ಭಾರಿ ದಟ್ಟನೆಯ ಜ್ವಾಲೆ ಹಾಗೂ ಕಡು ಕಪ್ಪನೆಯ ಹೊಗೆ ಬರುವುದನ್ನು ಟಿವಿ ದೃಶ್ಯಾವಳಿಗಳು ತೋರಿಸಿವೆ. ಬೆಂಕಿ ಆರಿದ ನಂತರ ಒಳಗೆ ಸುಟ್ಟು ಕರಕಲಾದ ಲೋಹದ ವಸ್ತುಗಳು, ಅವಶೇಷಗಳು ಮಾತ್ರವೇ ಉಳಿದಿದ್ದವು.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಆಕ್ಸಿಜನ್ ಒದಗಿಸಲಾಗುತ್ತಿದೆ. ಅವರಲ್ಲಿ ಅನೇಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಅಗ್ನಿ ಅನಾಹುತಕ್ಕೆ ಕಾರಣ ಏನು ಎಂಬುದರ ಪತ್ತೆಗೆ ತನಿಖೆ ನಡೆಸುವಂತೆ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಆದೇಶಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಈವರೆಗೂ ಸ್ಪಷ್ಟವಾಗಿಲ್ಲ. ಆದರೆ ಸ್ಥಳದಲ್ಲಿ ಪಟಾಕಿಗಳನ್ನು ಸಿಡಿಸಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಕುರ್ದಿಶ್ ಸುದ್ದಿ ವಾಹಿನಿ ರುಡಾವ್ ವರದಿ ಮಾಡಿದೆ. ಮದುವೆ ಸಭಾಂಗಣದ ಹೊರಭಾಗವನ್ನು ಹೊತ್ತಿ ಉರಿಯುವಂತಹ ಸಾಮಗ್ರಿಗಳಿಂದ ಅಲಂಕರಿಸಲಾಗಿತ್ತು. ಇದು ಇರಾಕ್‌ನಲ್ಲಿ ಕಾನೂನು ಬಾಹಿರ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಮೋಸುಲ್ ನಗರದ ಹೊರ ಭಾಗದಲ್ಲಿರುವ ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮೀಯರು ಅಧಿಕ ಸಂಖೆಯಲ್ಲಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement