ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆ ನಡುವೆ ಕೆನಡಾವು ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡಿದ್ದಕ್ಕಾಗಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಅವರು ಕೆನಡಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು, ಕೆನಡಾ ಎಲ್ಲ ಕೊಲೆಗಾರರ ಕೇಂದ್ರವಾಗಿರಬಾರದು ಮತ್ತು ಅವರಿಗೆ ಸುರಕ್ಷಿತ ನೆಲೆಯನ್ನು ಒದಗಿಸಬಾರದು ಎಂದು ಪ್ರತಿಪಾದಿಸಿದ್ದಾರೆ. “ಕೆನಡಾ ಎಲ್ಲಾ ಕೊಲೆಗಾರರ ಕೇಂದ್ರವಾಗಿರಬಾರದು. ಕೊಲೆಗಡುಕರು ಕೆನಡಾಕ್ಕೆ ಹೋಗಿ ಆಶ್ರಯ ಪಡೆಯಬಹುದು ಮತ್ತು ಈ ಕೊಲೆಗಡುಕರಿಂದ ಸಾಯಿಸಲ್ಪಟ್ಟವರು ಹಾಗೂ ಸಂಬಂಧಿಕರು ನರಳುತ್ತಿರುವಾಗ ಅವರು ಅಲ್ಲಿ ಅದ್ಭುತ ಜೀವನ ನಡೆಸಬಹುದು. ಆದರೆ, ಇದಾಗಬಾರದು ಎಂದು ಅವರು ಹೇಳಿದರು.
ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು “ಸಂಭಾವ್ಯ” ಭಾಗಿಯಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಿದ ನಂತರ ಭಾರತ-ಕೆನಡಾ ಸಂಬಂಧಗಳು ತೀವ್ರ ಹದಗೆಟ್ಟಿದ್ದು, ಈ ವೇಳೆ ಬಾಂಗ್ಲಾದೇಶ ವಿದೇಶಾಂಗ ಸಚಿವರ ಈ ಹೇಳಿಕೆ ಬಂದಿದೆ. ಭಾರತವು ಕೆನಡಾದ ಆರೋಪಗಳನ್ನು “ಅಸಂಬದ್ಧ” ಮತ್ತು “ಪ್ರೇರಣೆ” ಎಂದು ಸಾರಾಸಗಟಾಗಿ ತಿರಸ್ಕರಿಸಿದೆ. ಪ್ರಧಾನಿ ಟ್ರುಡೊ ಆರೋಪಿಸಿದ ನಂತರ ಕೆನಡಾವು ಭಾರತದ ರಾಜತಾಂತ್ರಿಕ ಹಿರಿಯ ಅಧಿಕಾರಿಯನ್ನು ಹೊರಹಾಕಿತು. ಇದಕ್ಕೆ ಪ್ರತಿಯಾಗಿ ಭಾರತವೂ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದೆ.
“ಭಾರತ ಮತ್ತು ಕೆನಡಾ ನಡುವಿನ ಈ ಸಮಸ್ಯೆಯ ವಿವರಗಳು ನನಗೆ ತಿಳಿದಿಲ್ಲ. ಆದರೆ ಕೆನಡಾದೊಂದಿಗೆ ಬಾಂಗ್ಲಾದೇಶ ಹೊಂದಿರುವ ಸಮಸ್ಯೆ ಬಗ್ಗೆ ನನಗೆ ತಿಳಿದಿದೆ” ಎಂದು ಹೇಳಿದರು. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಹಂತಕ ಕೆನಡಾದಲ್ಲಿ ಹೇಗೆ ನೆಲೆಸಿದ್ದಾನೆ ಎಂದು ಅವರು ವಿಷಾದಿಸಿದರು. “…ನಮ್ಮ ರಾಷ್ಟ್ರದ ಪಿತಾಮಹ ಬಂಗಬಂಧುವಿನ ಹತ್ಯೆಯ ಬಗ್ಗೆ ಸ್ವಯಂ ತಪ್ಪೊಪ್ಪಿಕೊಂಡ ಕೊಲೆಗಾರನನ್ನು ಹಿಂದಕ್ಕೆ ಕಳುಹಿಸುವಂತೆ ನಾವು ಕೆನಡಾ ಸರ್ಕಾರವನ್ನು ವಿನಂತಿಸುತ್ತಿದ್ದೇವೆ. ದುರದೃಷ್ಟವಶಾತ್, ಕೆನಡಾ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಅವರು ಹೇಳಿದರು.
“ಬಂಗಬಂಧು” ಶೇಖ್ ಮುಜಿಬುರ್ ರೆಹಮಾನ್ ಹಂತಕರನ್ನು ಹಸ್ತಾಂತರಿಸಲು ಕೆನಡಾಕ್ಕೆ ಇಷ್ಟವಿಲ್ಲದಿರುವಿಕೆ ಬಗ್ಗೆ ಕೇಳಿದಾಗ ಬಾಂಗ್ಲಾದೇಶದ ವಿದೇಶಾಂಗ ಸಚಿವರು, ಕೆನಡಾದ ಸಮಸ್ಯೆಯೆಂದರೆ ಅವರು ಒಂದರ ನಂತರ ಒಂದರಂತೆ ಕ್ಷಮೆ ನೀಡುತ್ತಿದ್ದಾರೆ ಮತ್ತು “ಅದು ಯಾಕೆಂದು ಅರ್ಥವಾಗುತ್ತಿಲ್ಲ” ಎಂದು ಹೇಳಿದರು. “ಅವರಿಗೆ ಕಾನೂನು ಇದೆ, ಆದರೆ ಕಾನೂನು ಕೊಲೆಗಾರನನ್ನು ರಕ್ಷಿಸಬಾರದು. ಕಾನೂನು ಈ ಕೆಟ್ಟ ವ್ಯಕ್ತಿಗಳನ್ನು ರಕ್ಷಿಸಬಾರದು, ಆದರೆ ದುರದೃಷ್ಟವಶಾತ್, ಕೆನಡಾ ಹಾಗೆ ಮಾಡುತ್ತಿದೆ ಎಂದು ಅವರು ಹೇಳಿದರು.
ಕೆನಡಾ ಮಾನವ ಹಕ್ಕುಗಳ ಹೆಸರಿನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಕಳವಳಗಳನ್ನು ನಿರ್ಲಕ್ಷಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಂಗ್ಲಾದೇಶದ ವಿದೇಶಾಂಗ ಸಚಿವರು, ವಲಸೆ ಚರ್ಚೆಯಲ್ಲಿ ಮಾನವ ಹಕ್ಕುಗಳ ಸಂಭಾವ್ಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಮಾನವ ಹಕ್ಕುಗಳ ಪರಿಕಲ್ಪನೆಯನ್ನು ಅನೇಕರು ಅನೇಕ ಬಾರಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ನಿಜವಾಗಿಯೂ ದುರದೃಷ್ಟಕರವಾಗಿದೆ. ಏಕೆಂದರೆ ಇದು ಕೊಲೆಗಾರರು ಮತ್ತು ಭಯೋತ್ಪಾದಕರನ್ನು ರಕ್ಷಿಸಲು ಕೆಲವರಿಗೆ ಒಂದು ಅನುಕೂಲವಾಗಿದೆ, ಅದು ಬದಲಾಗಬೇಕು” ಎಂದರು. “ಮತ್ತು ಮಾನವ ಹಕ್ಕುಗಳ ಬ್ಯಾನರ್ ಅಡಿಯಲ್ಲಿ ಸರ್ಕಾರಗಳು ಈ ಮಾನವ ಹಕ್ಕುಗಳ ಪರಿಕಲ್ಪನೆಯನ್ನು ದುರುಪಯೋಗಪಡಿಸಿಕೊಳ್ಳಬಾರದು” ಎಂದು ಅವರು ಹೇಳಿದರು.
ಕೆನಡಾ ಸರ್ಕಾರದ ನೀತಿಯು ಬದಲಾಗಬಹುದೆಂಬ ಭರವಸೆಯನ್ನು ವ್ಯಕ್ತಪಡಿಸಿದ ಮೊಮೆನ್, “ಒಂದು ದಿನ ಕೆನಡಾದ ಸರ್ಕಾರವು ಆ ನಿಯಮವನ್ನು ಬದಲಾಯಿಸುತ್ತದೆ, ಏಕೆಂದರೆ ಈಗ ಕೆನಡಾವು ಎಲ್ಲಾ ರಾಷ್ಟ್ರಗಳ ಕೊಲೆಗಾರರ ಕೇಂದ್ರವಾಗಿದೆ.” “ಕೆನಡಾ ಒಂದು ಸುಂದರ ದೇಶ. ಇದು ಉತ್ತಮ ದೇಶವಾಗಿದೆ, ಆದರೆ ಈ ನಿರ್ದಿಷ್ಟ ಕಾನೂನು ಕೆನಡಾದ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ, ಕೆನಡಾದಲ್ಲಿ ಸುರಕ್ಷಿತ ನೆಲೆಯನ್ನು ಒದಗಿಸಿ ಕೆನಡಾ ಕೊಲೆಗಾರರನ್ನು ಅನುಮತಿಸಬಾರದು ”ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ