ನವದೆಹಲಿ : ದೆಹಲಿಯಲ್ಲಿ ನಡೆದ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವು ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚಿನ ನೆನಪಿನಲ್ಲೇ ಅತಿ ದೊಡ್ಡ ಕಳ್ಳತನದ ಪ್ರಕರಣವಾಗಿದೆ. ಇದನ್ನು ಛತ್ತೀಸ್‌ಗಢದ ಒಬ್ಬನೇ ಒಬ್ಬ ಯೋಜಿಸಿ ಕಾರ್ಯಗತಗೊಳಿಸಿದ್ದಾನೆ.
ಆತ ಬಹುಶಃ ಇನ್ನೂ ಹೆಚ್ಚು ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನೇನೋ, ಆದರೆ ಆತನ ರಾಜ್ಯದಲ್ಲಿ ಇನ್ನೊಬ್ಬ ಕಳ್ಳನನ್ನು ಬಂಧಿಸಿದ್ದು, ಈತನ ಬಂಧನಕ್ಕೆ ಕಾರಣವಾಗಿದೆ. ಬಂಧಿಸಲಪಟ್ಟ ಆ ಕಳ್ಳ ಒಬ್ಬ ವ್ಯಕ್ತಿ “ದೊಡ್ಡ ಕೆಲಸ” ಮಾಡಿ ದೆಹಲಿಯಿಂದ ಹಿಂತಿರುಗಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ʼದೊಡ್ಡ ಕೆಲಸʼ ಮಾಡಿದ ವ್ಯಕ್ತಿ ಯಾರೆಂದು ತಲೆಕೆಡಿಸಿಕೊಂಡು ಬಲೆಬೀಸಿ ಹಿಡಿದಿದ್ದಾರೆ.
ಶುಕ್ರವಾರ ಬೆಳಗ್ಗೆ ಬಂಧಿತನಾಗಿರುವ, ಸದ್ಯ ಬಿಲಾಸ್‌ಪುರ ಪೊಲೀಸರ ವಶದಲ್ಲಿರುವ ಲೋಕೇಶ್ ಶ್ರೀವಾಸ (32) ಈ ತಿಂಗಳ ಆರಂಭದಲ್ಲಿ ಏಕಾಂಗಿಯಾಗಿ ಬಸ್ ಮೂಲಕ ದೆಹಲಿಗೆ ಬಂದಿದ್ದ. ಆತನ ಗುರಿಯಾದ ಭೋಗಲ್ ಪ್ರದೇಶದ ಉಮ್ರಾವ್ ಜ್ಯುವೆಲರ್ಸ್ ಸೋಮವಾರದಂದು ಮುಚ್ಚಲ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 24ರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಪಕ್ಕದ ಕಟ್ಟಡದಿಂದ ಈತ ಅಂಗಡಿಗೆ ನುಗ್ಗಿದ್ದ.ರಾತ್ರಿಯಿಡೀ ಅಂಗಡಿಯಲ್ಲಿಯೇ ಇದ್ದು, ಪ್ರದರ್ಶನಕ್ಕೆ ಇಟ್ಟಿದ್ದ ಚಿನ್ನಾಭರಣಗಳನ್ನು ಕದ್ದಿದ್ದಲ್ಲದೆ, ಸ್ಟ್ರಾಂಗ್‌ರೂಮ್‌ಗೆ ತೆರಳಿದ್ದ. ಆತ ಗೋಡೆಗೆ ರಂಧ್ರ ಕೊರೆದು ಸ್ಟ್ರಾಂಗ್ ರೂಂನಿಂದ ಎಲ್ಲಾ ಆಭರಣಗಳನ್ನು ತೆಗೆದುಕೊಂಡ. ಮಾರನೇ ದಿನ ಅಂದರೆ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಆತ ಬಂದ ದಾರಿಯಲ್ಲೇ ಅಂಗಡಿಯಿಂದ ಹೊರಟ, ಅಂದರೆ ಆತ ಕಳ್ಳತನಕ್ಕೆ ಚಿನ್ನಾಭರಣ ಅಂಗಡಿ ಪ್ರವೇಶಿಸಿದ ಸುಮಾರು 20 ಗಂಟೆಗಳ ನಂತರ. ಈತ ಸುಮಾರು 18 ಕೆ.ಜಿ. ಚಿನ್ನಾಭರಣವನ್ನು ದರೋಡೆ ಮಾಡಿದ್ದ.
ಮಂಗಳವಾರ ಚಿನ್ನಾಭರಣ ಮಳಿಗೆ ತೆರೆದಾಗ ಕಳ್ಳತನವಾಗಿರುವ ವಿಷಯ ಮಾಲೀಕನಿಗೆ ಗೊತ್ತಾಗಿದೆ, ಆದರೆ ಅದಾಗಲೇ ಈ ʼದೊಡ್ಡ ಕೆಲಸʼ ಮಾಡಿದ್ದ ಶ್ರೀವಾಸ್ ಛತ್ತೀಸ್‌ಗಢಕ್ಕೆ ತೆರಳುತ್ತಿದ್ದ.
ಅಂಗಡಿ ಕೊಳ್ಳೆ ಹೊಡೆದ ನಂತರ ಲೋಕೇಶ ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ಅಂತರ-ರಾಜ್ಯ ಬಸ್ ಟರ್ಮಿನಸ್‌ಗೆ (ಐಎಸ್‌ಬಿಟಿ) ಹೋಗಿದ್ದಾನೆ, ಅಲ್ಲಿಗೆ ಹೋಗುವ ಮೊದಲು ತನ್ನ ಲೂಟಿ ಚಿನ್ನಾರಭಣವನ್ನು ಒಯ್ಯಲು ದಾರಿಯಲ್ಲಿ ಹೆಚ್ಚುವರಿ ಚೀಲ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢದ ದುರ್ಗ್ ಪೊಲೀಸರು ಗುರುವಾರ ದೆಹಲಿ ಪೊಲೀಸರಿಗೆ ಕರೆ ಮಾಡಿ ಲೋಕೇಶ ರಾವ್ ಎಂಬ ಕಳ್ಳನನ್ನು ಬಂಧಿಸಿರುವುದಾಗಿ ತಿಳಿಸಿದ್ದು, ವಿಚಾರಣೆ ವೇಳೆ ಈ ಕಳ್ಳ, ಲೋಕೇಶ್ ಶ್ರೀವಾಸ ಎಂಬಾತ ದೆಹಲಿಯಲ್ಲಿ ‘ದೊಡ್ಡ ಕೆಲಸ’ ಮಾಡಿ ಬಿಲಾಸ್‌ಪುರದ ಬಾಡಿಗೆ ಮನೆಗೆ ಮರಳಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.
“ನಾವು ಅಂತರ್ಜಾಲದಲ್ಲಿ ಹುಡುಕಾಟದ ನಂತರ ಲೋಕೇಶ್ ಶ್ರೀವಾಸ ಎಂಬಾತನ ಫೋಟೋ ಸಿಕ್ಕಿತು ಮತ್ತು ನಮ್ಮಲ್ಲಿದ್ದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ನಾವು ಗುರುತಿಸಿದ ಶಂಕಿತರೊಂದಿಗೆ ಅದನ್ನು ಹೋಲಿಸಿದ್ದೇವೆ. ಫೋಟೋದಲ್ಲಿರುವ ವ್ಯಕ್ತಿಯ ಮೈಕಟ್ಟು ಬಿಳಿಯ ವಸ್ತ್ರದೊಂದಿಗೆ ಶಂಕಿತ ವ್ಯಕ್ತಿಯ ದೇಹಕ್ಕೆ ಫೋಟೋ ಹೊಂದಿಕೆಯಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಶರ್ಟ್ ಮತ್ತು ಕಪ್ಪು ಪ್ಯಾಂಟ್, ಕಪ್ಪು ಚೀಲವನ್ನು ಹೊತ್ತೊಯ್ದದ್ದು ಭಾನುವಾರ ಭೋಗಲ್ ಮಾರುಕಟ್ಟೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಶ್ರೀವಾಸನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಲಾಗಿದ್ದು, ಸೋಮವಾರ ಕಾಶ್ಮೀರ್ ಗೇಟ್‌ನಲ್ಲಿರುವ ಐಎಸ್‌ಬಿಟಿಯಲ್ಲಿ ಅದು ಸ್ವಿಚ್ ಆನ್ ಆಗಿರುವುದು ಪೊಲೀಸರಿಗೆ ಕಂಡುಬಂದಿದೆ. ಶ್ರೀವಾಸ್ ರಾತ್ರಿ 8:40ಕ್ಕೆ ಛತ್ತೀಸ್‌ಗಢಕ್ಕೆ ಟಿಕೆಟ್ ಖರೀದಿಸುತ್ತಿರುವುದನ್ನು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಆತ ಎರಡು ಚೀಲಗಳನ್ನು ಹೊತ್ತೊಯ್ಯುತ್ತಿರುವುದು ದೃಶ್ಯಾವಳಿಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ಪೊಲೀಸ್ ತಂಡವು ದುರ್ಗ್ ಪೊಲೀಸ್ ಮತ್ತು ರಾಯ್‌ಪುರ ಪೊಲೀಸರ ತಂಡಗಳೊಂದಿಗೆಗುರುವಾರವೇ ಛತ್ತೀಸ್‌ಗಢಕ್ಕೆ ತೆರಳಿ ಬಿಲಾಸ್‌ಪುರದ ಸ್ಮೃತಿ ನಗರವನ್ನು ತಲುಪಿದೆ, ಅಲ್ಲಿ ಶ್ರೀವಾಸ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಇಡೀ ರಾತ್ರಿ ಮನೆಯ ಹೊರಗೆ ಕಾದು ಕುಳಿತಿದ್ದ ಪೊಲೀಸರು ಶುಕ್ರವಾರ ಬೆಳಗ್ಗೆ ಆತ 5:45ಕ್ಕೆ ಮನೆಗೆ ತಲುಪಿದಾಗ ಶ್ರೀವಾಸನನ್ನು ಬಂಧಿಸಿದ್ದಾರೆ.
ಶ್ರೀವಾಸ ಸದ್ಯ ಬಿಲಾಸ್‌ಪುರ ಪೊಲೀಸರ ವಶದಲ್ಲಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತ ಬೇರೆ ಬೇರೆ ರಾಜ್ಯಗಳಲ್ಲಿ ಅನೇಕ ಕಳ್ಳತನ ನಡೆಸಿದ್ದ. ಆದರೆ ದೆಹಲಿಯಲ್ಲಿ ಮೊದಲನೇ ಸಲ ಕಳ್ಳತನ ಮಾಡಿದ್ದನಂತೆ.
ನಿಮ್ಮ ಕಾಮೆಂಟ್ ಬರೆಯಿರಿ