ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ನಿಮಗೆ ಕಾಂಗ್ರೆಸ್‌ನಲ್ಲಿ ಏಳು ಮಂತ್ರಿ ಸ್ಥಾನ ಸಿಕ್ಕಿದೆ, ಇನ್ನೆಷ್ಟು ಸ್ಥಾನ ಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜಾತ್ಯತೀತ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರು ಜಾತಿ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ. ಇದು ಖಂಡನೀಯ. ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ವಿವಿಧ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
ʼನಿಮಗೆ ಮುಖ್ಯಮಂತ್ರು ಸ್ಥಾನ ಬೇಕಿದ್ದರೆ ನಾಯಕತ್ವದ ಮೂಲಕ ನಿಮ್ಮ ಸಮುದಾಯದವರಿಂದ ಹೆಚ್ಚಿನ ಮತ ಹಾಕಿಸಿಕೊಳ್ಳಿ. ನಂತರ ಗೆದ್ದುಬಂದು ಮುಖ್ಯಮಂತ್ರಿಯಾಗಿ ಈ ವಿಚಾರದಲ್ಲಿ ನಿಮ್ಮ ಆಸಕ್ತಿಯನ್ನು ತೋರಿಸಿ ಎಂದ ವಿಶ್ವನಾಥ ಅವರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದಿಂದ ಎಷ್ಟು ಮತ ಹಾಕಿಸಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.
ಶಾಮನೂರು ಶಿವಶಂಕರಪ್ಪನವರೇ. ಸಿದ್ದರಾಮಯ್ಯ ಅವರಿಂದಲೇ ಗೆದ್ದಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಲಿಂಗಾಯತರೂ ಸೇರಿದಂತೆ ಎಲ್ಲ ಸಮುದಾಯದವರು ಪಕ್ಷವನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ನೀವು ಈ ರೀತಿಯಾಗಿ ಜಾತಿಯ ವಿಷಯ ಮಾತನಾಡಿದರೆ ಆಡಳಿತ ಕುಸಿಯುತ್ತದೆ. ಸಿದ್ದರಾಮಯ್ಯ ಅವರಿಗೆ ಹತ್ತಿರದವರು ನೀವು. ನೀವು ಹೀಗೆಲ್ಲ ಬೀದಿ ರಂಪ ಮಾಡುವುದೇಕೆ ಎಂದು ಪ್ರಶ್ನಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ