ಎಡಿಟ್ ಮಾಡಿದ ಆಡಿಯೋ, ಕೊರೊನಾ ಲಸಿಕೆ ಪ್ರಮಾಣಪತ್ರ, ನಕಲಿ ಲವರ್‌ ….ಒಂದೇ ಎರಡೇ : ಸುಳ್ಳಿನ ಸರಮಾಲೆ ಮೂಲಕ 2 ವರ್ಷ ಕೊಲೆಯ ರಹಸ್ಯ ಮುಚ್ಚಿಟ್ಟಿದ್ದ ಕಾನ್ಸ್‌ಟೇಬಲ್…!

ನವದೆಹಲಿ: ದೆಹಲಿ ಪೊಲೀಸ್‌ ಇಲಾಖೆಯ ವಿವಾಹಿತ ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಮಾಜಿ ಸಹೋದ್ಯೋಗಿಯನ್ನು ಕೊಂದ ನಂತರ ಎರಡು ವರ್ಷಗಳ ಕಾಲ ಪೊಲೀಸರು ಮತ್ತು ಕುಟುಂಬದಿಂದ ಕೊಲೆಯ ರಹಸ್ಯ ಮುಚ್ಚಿಡಲು ಸುಳ್ಳಿನ ಸರಮಾಲೆಯನ್ನೇ ಹೆಣೆದಿದ್ದು, ಆದರೂ ಕೊಲೆಯ ವಿಷಯ ಎರಡು ವರ್ಷಗಳ ನಂತರ ಬಯಲಾಗಿದೆ. ಎರಡು ವರ್ಷಗಳ ಕಾಲ ಈ ಕಾನ್‌ಸ್ಟೆಬಲ್‌ ಮಹಿಳೆಯ ಕುಟುಂಬಕ್ಕೆ ಮಹಿಳೆ ಜೀವಂತವಾಗಿದ್ದಾಳೆ ಎಂದು ನಂಬುವಂತೆ ಮಾಡಿದ್ದ ಮತ್ತು ಅವಳ ಜೊತೆ “ಮಾತನಾಡಲು” ವ್ಯವಸ್ಥೆ ಸಹ ಮಾಡಿದ್ದ…!
ವಿಸ್ತೃತವಾದ ಈ ಸುಳ್ಳಿನ ಸರಮಾಲೆಯ ಕಥೆಯನ್ನು ಕೊನೆಗೂ ಭೇದಿಸಲಾಯಿತು ಮತ್ತು ದೆಹಲಿ ಪೊಲೀಸರಿಗೆ ಬರುವ ಪಿಸಿಆರ್ ಕರೆಗಳಿಗೆ ಉತ್ತರಿಸುವ ಕೆಲಸವನ್ನು ವರ್ಷಗಳ ಕಾಲ ಮಾಡಿದ್ದ ಕಾನ್‌ಸ್ಟೆಬಲ್, ತನ್ನ ಇಬ್ಬರು ಸಹಚರರೊಂದಿಗೆ ಸಿಕ್ಕಿಬಿದ್ದಿದ್ದಾನೆ. ಈಗ ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಸುರೇಂದ್ರ ರಾಣಾ (42) ಎಂಬ ದೆಹಲಿ ಪೊಲೀಸ್‌ ಇಲಾಖೆಯ ಹೆಡ್ ಕಾನ್‌ಸ್ಟೆಬಲ್, ಮೃತ ಯುವತಿಯನ್ನು ಪ್ರೀತಿಸುತ್ತಿದ್ದ, ಆದರೆ ಅವಳು ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಈ ಕಾರಣಕ್ಕಾಗಿಯೇ ಹೆಡ್ ಕಾನ್‌ಸ್ಟೆಬಲ್ ಆಕೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸುರೇಂದ್ರ ರಾಣಾನ ಸೋದರಳಿಯಂದಿರಾದ ರವಿನ್ (26) ಮತ್ತು ರಾಜಪಾಲ (33) ಅವರು ಕೊಲೆ ಮುಚ್ಚಿ ಹಾಕಲು ಈತನಿಗೆ ಸಹಾಯ ಮಾಡಿದರು.

ಮೋನಾ ಎಂದು ಗುರುತಿಸಲಾದ ಯುವತಿ, 2014 ರಲ್ಲಿ ದೆಹಲಿ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇರಿಕೊಂಡಳು. ಇಬ್ಬರನ್ನೂ ಪೊಲೀಸ್‌ ನಿಯಂತ್ರಣ ಕೊಠಡಿಗೆ ನಿಯೋಜಿಸಲಾಯಿತು, ಅಲ್ಲಿ ಅವರಿಗೆ ಪರಸ್ಪರ ಪರಿಚಯವಾಯಿತು. ಏತನ್ಮಧ್ಯೆ, ಮೋನಾ ಉತ್ತರ ಪ್ರದೇಶದ ಪೊಲೀಸ್‌ ಇಲಾಖೆಯಲ್ಲಿ ಸಬ್-ಇನ್‌ಸ್ಪೆಕ್ಟರ್ ಆಗಿ ಕೆಲಸ ಪಡೆದುಕೊಂಡಳು. ನಂತರ, ನಂತರ ತನ್ನ ದೆಹಲಿ ಕೆಲಸ ಬಿಟ್ಟಳು ಮತ್ತು ದೆಹಲಿಯಿಂದ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದಳು.
ಪೊಲೀಸರ ಪ್ರಕಾರ, ಮೋನಾ ಕೆಲಸ ತೊರೆದ ನಂತರವೂ ಸುರೇಂದ್ರ ಅವಳ ಮೇಲೆ ನಿಗಾ ಇಟ್ಟಿದ್ದ. ಈ ವಿಷಯ ಮೋನಾಗೆ ತಿಳಿದಾಗ, ಅವಳು ಪ್ರತಿಭಟಿಸಿದಳು. ಸೆಪ್ಟೆಂಬರ್ 8, 2021ರಂದು ಈ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿತ್ತು, ನಂತರ ಸುರೇಂದ್ರ ಮೋನಾಳನ್ನು ನಂಬಿಸಿ ಬೇರೆ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದಾನೆ, ಹಾಗೂ ಆಕೆಯ ದೇಹವನ್ನು ಚರಂಡಿಗೆ ಎಸೆದು ದೇಹ ಯಾರಿಗೂ ಕಾಣದಂತೆ ಅದರ ಮೇಲೆ ಕಲ್ಲು ಹಾಕಿ ಮುಚ್ಚಿದ್ದಾನೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ನಂತರ ಮೋನಾಳ ಕುಟುಂಬಕ್ಕೆ ಕರೆ ಮಾಡಿ ಅವಳು ಅರವಿಂದ ಎಂಬಾತನೊಂದಿಗೆ ನಾಪತ್ತೆಯಾಗಿದ್ದಾಳೆಂದು ಸುಳ್ಳು ಹೇಳುವುದರೊಂದಿಗೆ ಆತ ತನ್ನ ವಿಸ್ತಾರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ಮೋನಾ ಮನೆಯವರ ಜತೆ ಸಂಪರ್ಕ ಮುಂದುವರಿಸಿದ ಸುರೇಂದ್ರ ಆಕೆಯನ್ನು ಹುಡುಕುತ್ತಿರುವಂತೆ ನಟಿಸುತ್ತಿದ್ದ. ಆಕೆಯ ಮನೆಯವರ ಜೊತೆ ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದ.
ಮೋನಾ ಜೀವಂತವಾಗಿದ್ದಾಳೆ ಎಂದು ಕುಟುಂಬಕ್ಕೆ ತೋರಿಸಲು, ಆತ ಕೊರೊನಾ ವೈರಸ್ ವಿರುದ್ಧ ಲಸಿಕೆ ಹಾಕಲು ಮಹಿಳೆಯೊಬ್ಬಳನ್ನು ಕರೆದೊಯ್ದು ನಂತರ ಅವಳ ಬದಲಿಗೆ ಮೋನಾ ಹೆಸರಿನಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರ ಪಡೆಯುವಲ್ಲಿ ಯಶಸ್ವಿಯಾದ. ಅಲ್ಲದೆ, ಮೋನಾ ಜೀವಂತವಾಗಿದ್ದಾಳೆ ಮತ್ತು ಬ್ಯಾಂಕ್‌ ಪಾಸ್‌ ಬುಕ್‌ ಬಳಸುತ್ತಿದ್ದಾಳೆ ಎಂಬ ಭಾವನೆ ಬರುವಂತೆ ಮಾಡಲು ಅವಳ ಬ್ಯಾಂಕ್ ಖಾತೆಯಿಂದ ತಾನೇ ವಹಿವಾಟುಗಳನ್ನು ಮಾಡಿದ. ಆಕೆಯ ಸಿಮ್ ಕಾರ್ಡ್ ಕೂಡ ಬಳಸಿದ.
ಕೆಲವೊಮ್ಮೆ, ಮೋನಾ ಎಲ್ಲಿದ್ದಾರೆ ಎಂಬುದರ ಕುರಿತು ತನಗೆ ಮಾಹಿತಿ ಇದೆ ಎಂದು ಅವರು ಕುಟುಂಬಕ್ಕೆ ಹೇಳುತ್ತಿದ್ದ ಮತ್ತು ಐದು ರಾಜ್ಯಗಳಾದ್ಯಂತ ಅನೇಕ ನಗರಗಳಿಗೆ ಅವಳ ಕುಟುಂಬದೊಂದಿಗೆ ಹುಡುಕಾಟ ಕೂಡ ನಡೆಸಿದ್ದ.

ಇಷ್ಟೇ ಅಲ್ಲದೆ, ಸುರೇಂದ್ರ ನಂತರ ತನ್ನ ಸಂಬಂಧಿ ರಾಬಿನ್‌ ಎಂಬವನನ್ನು ಈ ಪ್ರಕರಣದಲ್ಲಿ ಉಪಯೋಗಿಸಿಕೊಂಡ, ಈ ಸಂಬಂಧಿ ರಾಬಿನ್‌ ಮೋನಾ ಕುಟುಂಬದ ಜೊತೆ ತಾನು “ಅರವಿಂದ” ಎಂಬಂತೆ ನಟಿಸಿ ಮಾತನಾಡುತ್ತಿದ್ದ…!
ಒಂದು ಕರೆಯಲ್ಲಿ, ಈ “ಅರವಿಂದ” (ನಕಲಿ) ಮೋನಾ ಕುಟುಂಬಕ್ಕೆ ತಾನು ಹಾಗೂ ಮೋನಾ ಗುರ್ಗಾಂವ್‌ನಲ್ಲಿದ್ದೇವೆ ಮತ್ತು ಮದುವೆಯಾಗಿದ್ದೇವೆ ಎಂದು ಹೇಳಿದ್ದ. “ನಮ್ಮ ಹಿಂದೆ ನನ್ನ ಕುಟುಂಬವಿದೆ. ಹೀಗಾಗಿ ನಾವು ಪಂಜಾಬ್‌ಗೆ ಹೋಗುತ್ತಿದ್ದೇವೆ ಮತ್ತು ರೋಹ್ಟಕ್ ತಲುಪಿದ್ದೇವೆ. ನಾವು 10-15 ದಿನಗಳಲ್ಲಿ ನಿಮ್ಮ ಸ್ಥಳಕ್ಕೆ ಬರುತ್ತೇವೆ” ಎಂದು ಆತ ಫೋನ್ ಮೂಲಕ ಮೋನಾ ಕುಟುಂಬಕ್ಕೆ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಕುಟುಂಬದವರು ಮೋನಾ ಜೊತೆ ಮಾತನಾಡುವುದಾಗಿ ಒತ್ತಾಯಿಸಿದಾಗ ಅವಳು ತುಂಬಾ ಹೆದರುತ್ತಿದ್ದಾಳೆ ಮತ್ತು ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದ.
ಪೊಲೀಸರು ಮತ್ತು ಮೋನಾಳ ಕುಟುಂಬವನ್ನು ವಂಚಿಸಲು ರಾಬಿನ್‌, ಹರಿಯಾಣದಾದ್ಯಂತ ಹಾಗೂ ಡೆಹ್ರಾಡೂನ್, ರಿಷಿಕೇಶ್ ಮತ್ತು ಮಸ್ಸೂರಿಯ ಹೋಟೆಲ್‌ಗಳಿಗೆ ವೇಶ್ಯೆಯರನ್ನು ಕರೆದೊಯ್ಯುತ್ತಿದ್ದ, ರಾಬಿನ್ ಉದ್ದೇಶಪೂರ್ವಕವಾಗಿ ಮೋನಾ ಹೆಸರಿನ ದಾಖಲೆಗಳನ್ನು ಹೋಟೆಲ್‌ಗಳಲ್ಲಿ ಬಿಟ್ಟು ಬರುತ್ತಿದ್ದ. ಮತ್ತು ತಮ್ಮ ಬಗ್ಗೆ ಅವರಿಗೆ ಕರೆ ಮಾಡಿ ತಿಳಿಸುತ್ತಿದ್ದ. ಪೊಲೀಸರು ಕರೆಗಳನ್ನು ಪತ್ತೆಹಚ್ಚಿ ಹೋಟೆಲ್‌ಗಳನ್ನು ತಲುಪಿದಾಗ, ಮೋನಾ ಅಲ್ಲಿದ್ದಾರೆ ಎಂದು ಸಿಬ್ಬಂದಿ ಖಚಿತಪಡಿಸುತ್ತಿದ್ದರು. ಇದು ಮೋನಾ ತಮ್ಮ ಪೋಷಕರ ಬಳಿ ಹೋಗಲು ಇಚ್ಛಿಸುವುದಿಲ್ಲ ಎಂದು ಪೊಲೀಸರು ಭಾವಿಸಲು ಕಾರಣವಾಯಿತು ಎಂದು ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಆರೋಪಿ ಸುರೇಂದ್ರ ಮೋನಾಳ ಹಲವಾರು ಧ್ವನಿಮುದ್ರಿತ ಆಡಿಯೋಗಳನ್ನು ಹೊಂದಿದ್ದು, ಅದನ್ನು ಸಂಪಾದಿಸಿ ಆಕೆಯ ಕುಟುಂಬಕ್ಕೆ ಕಳುಹಿಸುವ ಮೂಲಕ ಆಕೆ ಬದುಕಿದ್ದಾಳೆ ಎಂದು ನಂಬಿಸುತ್ತಿದ್ದ. ಆ ಎಡಿಟ್ ಮಾಡಿದ ಆಡಿಯೊಗಳಲ್ಲಿ ಒಂದರಲ್ಲಿ, ಮೋನಾ ತನ್ನ ತಾಯಿ ತನ್ನ ಮೇಲೆ ಕೋಪಗೊಂಡಿದ್ದಾಳೆಂದು ತಿಳಿದಿದ್ದರಿಂದ ತಾನು ಮನೆಗೆ ವಾಪಸಾಗಲು ಬಯಸುವುದಿಲ್ಲ ಎಂದು “ಹೇಳುವುದು” ಸಹ ಕೇಳಿಬರುತ್ತದೆ.
ಆದರೆ ಎರಡು ತಿಂಗಳ ಹಿಂದೆ ಈ ಪ್ರಕರಣವು ಅಂತಿಮವಾಗಿ ಅಪರಾಧ ವಿಭಾಗಕ್ಕೆ ಬಂದಾಗ, ಅಧಿಕಾರಿಗಳು ಅರವಿಂದನಂತೆ ನಟಿಸಿ ಮೋನಾಳ ಕುಟುಂಬದೊಂದಿಗೆ ಮಾತನಾಡುತ್ತಿದ್ದ ರಾಬಿನ್ ಸಂಖ್ಯೆಯನ್ನು ಪತ್ತೆಹಚ್ಚುವ ಕೆಲಸ ಪ್ರಾರಂಭಿಸಿದರು.
“ನಮ್ಮ ತನಿಖೆಯಲ್ಲಿ, ಈ ಸಂಖ್ಯೆ ರಾಜಪಾಲ್‌ಗೆ ಸೇರಿದ್ದು ಎಂಬುದು ಗೊತ್ತಾಯಿತು ಮತ್ತು ಹಲವಾರು ಸುಳಿವುಗಳನ್ನು ಅನುಸರಿಸಿ ಹೋದ ನಂತರ, ಪಿತೂರಿ ಬಯಲಿಗೆ ಬಂತು” ಎಂದು ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.
ಪೊಲೀಸರು ಮೋನಾಳ ಅಸ್ಥಿಪಂಜರದ ಅವಶೇಷಗಳನ್ನು ಆಕೆಯನ್ನು ಎಸೆದ ಚರಂಡಿಯಿಂದ ವಶಪಡಿಸಿಕೊಂಡರು ಮತ್ತು ಗುರುತನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪ್ರೊಫೈಲಿಂಗ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಉತ್ತರ ಪ್ರದೇಶದ ಬುಲಂದ್‌ಶಹರ್‌ಗೆ ಸೇರಿದ ಮೋನಾ ಪ್ರತಿಭಾವಂತ ವಿದ್ಯಾರ್ಥಿ ಮತ್ತು ಕ್ಲಾಸ್ ಟಾಪರ್ ಆಗಿದ್ದಳು. ಅವಳು ಬಿ.ಎಡ್. ಪದವಿ ಪಡೆದಿದ್ದಳು ಮತ್ತು ದೊಡ್ಡ ಅಧಿಕಾರಿಯಾಗಲು ಬಯಸಿದ್ದಳು. ಮತ್ತೊಂದೆಡೆ, ರಾಣಾನಿಗೆ ಮದುಬೆಯಾಗಿ 12 ವರ್ಷದ ಮಗನಿದ್ದ. ಮೋನಾ ಅವನನ್ನು ತಂದೆಯಂತೆಯೇ ನೋಡಿದ್ದಳು. ಆದರೆ ಅವಳು ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಆರೋಪಿ ಮೋನಾಳನ್ನು ಕೊಂದು ಹೂತಿಟ್ಟಿದ್ದ ಎನ್ನಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement