ಪ್ರಧಾನಿ ಮೋದಿಯ ಈ ಘೋಷಣೆಯ ನಂತರ 12 ವರ್ಷಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 71 ವರ್ಷದ ರೈತ ಕಾಲಿಗೆ ಚಪ್ಪಲಿ ಹಾಕಿದ….!

ಹೈದಾರಾಬಾದ್: ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಘೋಷಣೆ ಮಾಡಿದ ಬೆನ್ನಲ್ಲೇ 12 ವರ್ಷಗಳಿಂದ ಕಾಲಿಗೆ ಚಪ್ಪಲಿ ಧರಿಸದೇ ಇದ್ದ 71 ವರ್ಷದ ರೈತರೊಬ್ಬರು ಕಾಲಿಗೆ ಚಪ್ಪಲಿ ಧರಿಸಿದ್ದಾರೆ…!
ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪಿಸಬೇಕು ಎಂದು ಹೋರಾಟ ನಡೆಸಿದ್ದ ಅವರು, ಇದರ ಅಂಗವಾಗಿ 12 ವರ್ಷಗಳಿಂದ ಕಾಲಿಗೆ ಚಪ್ಪಲಿ ಧರಿಸಿರಲಿಲ್ಲ. ಉತ್ತಮ ಬೆಲೆಯಿಲ್ಲದೆ ಅರಿಶಿನ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅರಿಶಿಣಕ್ಕೆ ಬೆಂಬಲ ಬೆಲೆ ಪಡೆಯಲು ತೆಲಂಗಾಣ ರಾಜ್ಯದಲ್ಲಿ ಮಂಡಳಿ ಸ್ಥಾಪಿಸಬೇಕು ಎಂದು ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಂ ಗ್ರಾಮದ ರೈತರಾದ ಮುತ್ಯಾಲ ಮನೋಹರರೆಡ್ಡಿ ಒತ್ತಾಯ ಮಾಡುತ್ತ ಬಂದಿದ್ದರು.
ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆಯ ಕನಸು ನನಸಾಗುವ ವರೆಗೂ ಕಾಲಿಗೆ ಚಪ್ಪಲಿ ಧರಿಸಬಾರದು ಎಂದು ನಿರ್ಧರಿಸಿದ್ದರು. ಹೀಗಾಗಿ ರೈತ ಮನೋಹರರೆಡ್ಡಿ ಅವರು 2011ರ ನವೆಂಬರ್ 4ರಿಂದ ಚಪ್ಪಲಿ ಧರಿಸಿರಲಿಲ್ಲ. ಅವರು ಅರಿಶಿಣ ಮಂಡಳಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ, ಭಾನುವಾರ ಪ್ರಧಾನಿ ಮೋದಿಯವರು ಅರಿಶಿನ ಮಂಡಳಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಬಳಿಕ ಮನೋಹರ್ ರೆಡ್ಡಿ ಅವರು ಬಹುದಿನಗಳ ತಮ್ಮ ಕನಸು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ನಿಜಾಮಾಬಾದ್ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಹೊಸ ಚಪ್ಪಲಿ ಧರಿಸಿದ್ದಾರೆ.
ತೆಲಂಗಾಣಕ್ಕೆ ಭಾನುವಾರ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ₹13,545 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಮತ್ತು ಮುಲುಗು ಜಿಲ್ಲೆಯಲ್ಲಿ ಸಮ್ಮಕ್ಕ- ಸಾರಕ್ಕ ಹೆಸರಿನಲ್ಲಿ ಕೇಂದ್ರೀಯ ಗಿರಿಜನರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಈ ವಿಶ್ವವಿದ್ಯಾಲಯವು ಅಂದಾಜು ₹900 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

ಅತಿ ಹೆಚ್ಚು ಅರಿಶಿಣ ಉತ್ಪಾದಿಸುವ ಜಿಲ್ಲೆ....
ನಿಜಾಮಾಬಾದ್ ತೆಲಂಗಾಣದಲ್ಲಿ ಅತಿ ಹೆಚ್ಚು ಅರಿಶಿನ ಉತ್ಪಾದಿಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಹಾಗೂ ನಿಜಾಮಾಬಾದ್ ಮಾರುಕಟ್ಟೆ ಯಾರ್ಡ್ ದೇಶದ ಅತಿದೊಡ್ಡ ಅರಿಶಿನ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2006 ರ ಮೊದಲು ಎನ್‌ಟಿಬಿ ಸ್ಥಾಪನೆಗೆ ಒತ್ತಾಯಿಸಿ ರೈತರು ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಸ್ವದೇಶಿ ಜಾಗರಣ ಮಂಚ್ ಅವರ ಬೇಡಿಕೆಗೆ ತನ್ನ ಬೆಂಬಲವನ್ನು ನೀಡಿತು. ನಂತರದ ವರ್ಷಗಳಲ್ಲಿ, ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಇದಕ್ಕೆ ಸೇರಿಕೊಂಡವು.
ನಿಜಾಮಾಬಾದ್‌ ಜಿಲ್ಲೆಯಲ್ಲಿ ಅರಿಶಿನವನ್ನು ಅಧಿಕೃತವಾಗಿ 60,000 ಎಕರೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತದೆ, ಅದರ ಇದರ ಕೃಷಿ ಪ್ರದೇಶವು ಅನಧಿಕೃತವಾಗಿ ಇದಕ್ಕಿಂತ ಬಹಳ ಹೆಚ್ಚಾಗಿದೆ. ಹೀಗಾಗಿ ತಂಬಾಕು ಮಾದರಿಯಲ್ಲೇ ಅರಿಶಿನ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬುದು ತೆಲಂಗಾಣ ರೈತರ ದೀರ್ಘಕಾಲದ ಬೇಡಿಕೆಯಾಗಿತ್ತು.

ಭಾರತದಿಂದ ರಫ್ತಾಗುವ ಒಟ್ಟು ಅರಿಶಿನದಲ್ಲಿ ಕನಿಷ್ಠ ಶೇ 30ರಷ್ಟು ಇಲ್ಲಿಂದಲೇ ಪೂರೈಕೆಯಾಗುತ್ತದೆ. ದರ ಏರಿಳಿತ ಮತ್ತು ಇತರ ಸಂಕಷ್ಟಗಳ ಮಧ್ಯೆ ಅರಿಶಿನ ಬೆಳೆವ ರೈತರು ಸಮರ್ಪಕ ಮಾರುಕಟ್ಟೆಗಾಗಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತೆಲಂಗಾಣಕ್ಕೆ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಘೋಷಣೆ ಮಾಡಿದ ಕೂಡಲೇ ಉತ್ತರ ತೆಲಂಗಾಣ ಜಿಲ್ಲೆಗಳಲ್ಲಿ ವಿಶೇಷವಾಗಿ ನಿಜಾಮಾಬಾದ್ ಸಂಸದೀಯ ಕ್ಷೇತ್ರದಲ್ಲಿ ಸಂಭ್ರಮಾಚರಣೆಗಳು ಜೋರಾಗಿ ನಡೆಯುತ್ತಿವೆ. ಯಾಕೆಂದರೆ ಅವರ ಮೂರು ದಶಕಗಳ ಕನಸು ನನಸಾಗಿದೆ.

ಪ್ರಮುಖ ಸುದ್ದಿ :-   ಆಸ್ಪತ್ರೆಯಲ್ಲಿ ಎಡವಟ್ಟು : 4 ವರ್ಷದ ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡುವುದರ ಬದಲು ನಾಲಿಗೆಗೆ ಆಪರೇಶನ್‌ ಮಾಡಿದ ವೈದ್ಯರು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement