ಕೆನಡಾದ ಜೊತೆ ಭಾರತದ ಕಠಿಣ ನಿಲುವು: ಅಕ್ಟೋಬರ್‌ 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ಕೆನಡಾಕ್ಕೆ ಸೂಚಿಸಿದ ಭಾರತ ; ವರದಿ

ನವದೆಹಲಿ: ಕೆನಡಾದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಕೆನಡಾದ ಆರೋಪದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಗದ್ದಲದ ನಡುವೆ ಅಕ್ಟೋಬರ್ 10 ರೊಳಗೆ ಸುಮಾರು 40 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಭಾರತವು ಕೆನಡಾಕ್ಕೆ ತಿಳಿಸಿದೆ ಎಂದು ದಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಅಕ್ಟೋಬರ್ 10ರ ನಂತರ ಕೆನಡಾದ ಯಾವುದೇ ರಾಜತಾಂತ್ರಿಕರು ದೇಶದಲ್ಲಿ ಉಳಿದುಕೊಂಡರೆ ಅವರ ರಾಜತಾಂತ್ರಿಕ ವಿನಾಯಿತಿಯನ್ನು ತೆಗೆದುಹಾಕಲಾಗುವುದು ಎಂದು ಭಾರತ ಎಚ್ಚರಿಸಿದೆ ಎಂದು ಈ ವಿಷಯದ ಬಗ್ಗೆ ನೇರ ಜ್ಞಾನ ಹೊಂದಿರುವ ವ್ಯಕ್ತಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಕೆನಡಿಯನ್ನರಿಗೆ ವೀಸಾ ನೀಡುವ ಪ್ರಕ್ರಿಯೆಗಳನ್ನು ಅಮಾನತುಗೊಳಿಸಿದ ನಂತರ ಕೆನಡಾವು ಎರಡು ಡಜನ್‌ಗಿಂತಲೂ ಹೆಚ್ಚು ತನ್ನ ರಾಜತಾಂತ್ರಿಕರನ್ನು ಭಾರತದಿಂದ ಹಿಂದಕ್ಕೆ ಕರೆಸಿಕೊಳ್ಳಲು ಬಯಸುತ್ತದೆ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲು ಭಾರತದ ಪ್ರಮುಖ ಕಾರಣಗಳಲ್ಲಿ ಭಯೋತ್ಪಾದನಾ ತನಿಖೆಯಲ್ಲಿ ಅದರ ಅಸಹಕಾರ ಕಾರಣ ಎಂದು ಹೇಳಲಾಗಿದೆ. ಈ ವಿಷಯದಲ್ಲಿ ಕೆನಡಾಕ್ಕೆ “ಮುಕ್ತ ಹಸ್ತ” ನೀಡಲಾಗುವುದಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. “ಅವರ ಉನ್ನತ ಅಧಿಕಾರಿಗಳು (ಕೆನಡಾದವರು) ಬಂದು ಭೇಟಿಯಾಗಿ ಭರವಸೆ ನೀಡುತ್ತಾರೆ, ಆದರೆ ಅದನ್ನು ತಲುಪಿಸುವುದಿಲ್ಲ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಕೆನಡಿಯನ್ನರಿಗೆ ವೀಸಾವನ್ನು ಅಮಾನತುಗೊಳಿಸಿದ ನಂತರ ದೇಶದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಲು ಭಾರತವು ಕೆನಡಾಕ್ಕೆ ಈ ಹಿಂದೆ ಸೂಚಿಸಿತ್ತು. ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ “ಭಾರತದ ಏಜೆಂಟರು” ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ದೇಶದ ಸಂಸತ್ತಿನಲ್ಲಿ ಪ್ರತಿಪಾದಿಸಿದ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಸಾರ್ವಕಾಲಿಕವಾಗಿ ಹದಗೆಟ್ಟಿದೆ. ನಿಜ್ಜರನ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂಬುದಕ್ಕೆ ತನ್ನ ಬಳಿ ಗುಪ್ತಚರ ಮಾಹಿತಿ ಮತ್ತು ಪುರಾವೆಗಳಿವೆ ಎಂದು ಟ್ರುಡೊ ಹೇಳಿಕೊಂಡಿದ್ದಾರೆ. ಆದರೆ ಈವರೆಗೆ ಪುರಾವೆ ಒದಗಿಸಿಲ್ಲ ಎಂದು ಭಾರತ ಹೇಳಿದೆ.
ಜೂನ್ 18 ರಂದು ಕೆನಡಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಅಪರಿಚಿತ ಬಂದೂಕುಧಾರಿಗಳಿಂದ ನಿಜ್ಜರ್ ಕೊಲ್ಲಲ್ಪಟ್ಟ. ಆತ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್‌ನ ಮುಖ್ಯಸ್ಥನಾಗಿದ್ದ ಮತ್ತು 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಹೆಸರಿಸಲಾಗಿತ್ತು. ಇಂಟರ್‌ಪೋಲ್ ಆತನ ವಿರುದ್ಧ ಸಾಕಷ್ಟು ಬಾರಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು, ಮೊದಲನೆಯದನ್ನು 2016 ರಲ್ಲಿ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

ಭಾರತದ ವಿರುದ್ಧ ಕೆನಡಾದ ಆರೋಪಗಳಲ್ಲಿ “ಪೂರ್ವಾಗ್ರಹವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೆಪ್ಟೆಂಬರ್ 21 ರಂದು ಹೇಳಿತ್ತು. “ಈ ಪ್ರಕರಣದಲ್ಲಿ (ನಿಜ್ಜರ್ ಪ್ರಕರಣ) ಕೆನಡಾ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಿರ್ದಿಷ್ಟ ಮಾಹಿತಿ ನೋಡಲು ನಾವು ಸಿದ್ಧರಿದ್ದೇವೆ. ಆದರೆ ನಮ್ಮ ಕಡೆಯಿಂದ, ಕೆನಡಾದ ನೆಲದಲ್ಲಿ ಭಾರತದ ವಿರುದ್ಧ ಕೆಲ ವ್ಯಕ್ತಿಗಳ ಅಪರಾಧ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಆದರೆ ಕೆನಡಾ ಕ್ರಮ ಕೈಗೊಂಡಿಲ್ಲ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಸಿಬ್ಬಂದಿಗೆ ಹೋಲಿಸಿದರೆ ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement