ಪ್ರಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಮುರೂರು ವಿಷ್ಣು ಭಟ್‌ ವಿಧಿವಶ

ಕುಮಟಾ : ಯಕ್ಷಗಾನದ ಬಡಗುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ವಿಷ್ಣು ಗಜಾನನ ಭಟ್ಟ ಮೂರೂರು (65) ಇಂದು, ಭಾನುವಾರ (ಅಕ್ಟೋಬರ್‌ ೮) ನಿಧನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುರೂರಿನ ಹೊನ್ನೆಕುಳಿಯವರಾದ ವಿಷ್ಣು ಭಟ್ಟರು ಸಿದ್ದಾಪುರದಲ್ಲಿ ನಿಧನರಾಗಿದ್ದಾರೆ. ಅವರು  ಪತ್ನಿ,ಪುತ್ರನನ್ನು ಅಗಲಿದ್ದಾರೆ. ಯಕ್ಷಗಾನ ಸ್ತ್ರೀ ವೇಷಧಾರಿಕೆಯಲ್ಲಿ ತಮ್ಮ ಭಾವಪೂರ್ಣ ಅಭಿನಯದ ಮೂಲಕ ಹೆಸರು ಪಡೆದಿದ್ದ ಅವರು ಮೂರೂರು ರಾಮ ಹೆಗಡೆಯವರಿಂದ ಆರಂಭಿಕ ಯಕ್ಷಗಾನದ ತರಬೇತಿ ಪಡೆದು ಕರ್ಕಿ ಮೇಳದ ಪಿ.ವಿ.ಹಾಸ್ಯಗಾರರಲ್ಲಿ ನಾಟ್ಯ ತರಬೇತಿ ಪಡೆದು ಶ್ರೇಷ್ಠ ಕಲಾವಿದರಾಗಿ ವಿಶೇಷವಾಗಿ ಸ್ತ್ರೀವೇಷದಲ್ಲಿ ತಮ್ಮ ಮನೋಜ್ಞ ಭಾವಾಭಿನಯದ ಮೂಲಕ ಹೆಸರು ಪಡೆದಿದ್ದರು.

ಭೀಷ್ಮ ವಿಜಯ ಪ್ರಸಂಗದ ಅಂಬೆ, ದಕ್ಷ ಯಜ್ಞದ ದಾಕ್ಷಾಯಣಿ, ಕೀಚಕವಧೆಯ ಸೈರಂದ್ರಿ, ದ್ರೌಪದಿ, ರೇಣುಕೆ, ದಮಯಂತಿ, ಸೀತೆ, ಚಂದ್ರಮತಿ, ಮಂಡೋದರಿ, ಮೇನಕೆ, ಪ್ರಭಾವತಿ, ಸಾವಿತ್ರಿ, ಶಕುಂತಲೆ ಹೀಗೆ ಅವರ ಹತ್ತು ಹಲವು ಸ್ತ್ರೀ ವೇಷಗಳು ಜನರ ಮನಸ್ಸಿನಲ್ಲಿ ಅಚ್ಚಳಿಯೇ ಉಳಿದಿದೆ. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ಮಾಡುತ್ತಿದ್ದ ಅವರು ತಾಳಮದ್ದಲೆ ಅರ್ಥಧಾರಿಯಾಗಿಯೂ ಹೆಸರಾಗಿದ್ದರು.
ಎಸ್‌ಎಸ್‌ಎಲ್ಸಿಯ ನಂತರ ಅವರು ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಗುಂಡುಬಾಳ, ಶಿರಸಿ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ, ಇಡಗುಂಜಿ ಮೊದಲಾದ ಮೇಳಗಳಲ್ಲಿ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾ ಸೇವೆ ಮಾಡಿದ್ದಾರೆ. ಅವರಿಗೆ ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಟ ಪ್ರಶಸ್ತಿ,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಸಂದಿವೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

4.3 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement