ನಮ್ಮದೇ ನಿಜವಾದ ಜೆಡಿಎಸ್ : ಯಾವ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗಲ್ಲ : ಸಿ.ಎಂ.ಇಬ್ರಾಹಿಂ

ಬೆಂಗಳೂರು : ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಈಗ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೇ ಸಡ್ಡು ಹೊಡೆದಿದ್ದಾರೆ.
ನಮ್ಮದೇ ಅಸಲಿ ಜೆಡಿಎಸ್. ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗುವುದಿಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ನಾನು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ, ನನ್ನನ್ನು ಆ ಸ್ಥಾನದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.
ಜೆಡಿಎಸ್-ಕರ್ನಾಟಕ ಚಿಂತನ-ಮಂಥನದ ಹೆಸರಲ್ಲಿ ಕರೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ. ನಮ್ಮ ಸಿದ್ಧಾಂತವೇ ಬೇರೆ. ಬಿಜೆಪಿ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಹಾಗೂ ಬಿಜೆಪಿ ಜೊತೆ ಹೋಗುವುದಿಲ್ಲ. ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು. ಹೀಗಾಗಿ ನಾವು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷನಾಗಿ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಾಗ ಪಕ್ಷದಲ್ಲಿ ಚರ್ಚೆ ಆಗಿದೆಯೇ..? ಶಾಸಕರ ಜೊತೆ ಸಭೆ ನಡೆಸಿದ್ದಾರೆಯೇ ..? ಯಾರ ಜೊತೆಯೂ ಚರ್ಚಿಸದೆ ಕುಮಾರಸ್ವಾಮಿಯವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷವೆಂದರೆ ಎಲ್ಲರ ಅಭಿಪ್ರಾಯ ಪಡೆಯಬೇಕಲ್ಲ. ಇದರಲ್ಲಿ ಶಾಸಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಎಂದರು.
ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ ನಮ್ಮ ಪಕ್ಷದ ತತ್ವ ಸಿದ್ಧಾಂತವೇ ಬೇರೆ, ಅವರ ಪಕ್ಷದ ತತ್ವ ಸಿದ್ಧಾಂತ ಬೇರೆ. ಈ ಕಾರಣಕ್ಕಾಗಿಯೇ ಅವರ ತತ್ವ ಸಿದ್ಧಾಂತವನ್ನು ನಾವು ವಿರೋಧ ಮಾಡುತ್ತೇವೆ ಎಂದು ಅವರು ಹೇಳಿದರು.
ಮುಂದೆ ಏನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇನೆ. ಯಾರನ್ನ ನೀವು ನಂಬಿದ್ದೀರೋ ಅವರೇ ನಿಮಗೆ ಕೈಕೊಟ್ಟರು. ನಮ್ಮ ಮನೆಯಲ್ಲಿ ನಾವು ಇದ್ದೇವೆ. ಮುಂದೆ ಏನಾಗುತ್ತದೆ ಎಂಬ ಬಗ್ಗೆ ಪರದೆ ಮೇಲೆಯೇ ನೋಡಬೇಕು. ನಾನು ಯಾವುದೇ ಬೆದರಿಕೆಗೆ ಹೆದರುವವನಲ್ಲ, ಅದೇರೀತಿ ಯಾರಿಗೂ ಬೆದರಿಕೆ ಹಾಕುವವನಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ʼನಮ್ಮ ಮೆಟ್ರೋʼ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ: ಸೇವೆಯಿಂದ ಉದ್ಯೋಗಿ ವಜಾ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement