ಧರ್ಮಶಾಲಾ : ಈ ವಿಶ್ವಕಪ್ ಪಂದ್ಯಾವಳಿ ಘಟಾನುಘಟಿ ತಂಡಗಳಿಗೆ ಶಾಕಿಂಗ್ ಪಂದ್ಯಾವಳಿಯಾಗಿ ಪರಿಣಮಿಸುತ್ತಿದೆ. ಕೆಲದಿನಗಳ ಹಿಂದೆ ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಮಣಿಸಿದ ಕೆಲವು ದಿನಗಳ ನಂತರ, ವಿಶ್ವದ ನಂ.14 ಶ್ರೇಯಾಂಕದ ನೆದರ್ಲ್ಯಾಂಡ್ಸ್ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದೆ. ಪ್ರಸ್ತುತ ಏಕದಿನದ ಪಂದ್ಯದಲ್ಲಿ ವಿಶ್ವದ ನಂ. 3 ತಂಡವಾಗಿರುವ ದಕ್ಷಿಣ ಆಫ್ರಿಕಾದಂತಹ ಹೆವಿವೇಯ್ಟ್ ತಂಡದ ವಿರುದ್ಧ ಬಾಲಂಗೋಚಿ ತಂಡವಾದ ನೆದರ್ಲೆಂಡ್ಸ್ 38 ರನ್‌ಗಳಿಂದ ಜಯಗಳಿಸಿ ವಿಶ್ವಕಪ್‌ನ ಇತಿಹಾಸದಲ್ಲಿಯೇ ಅತಿ ದೊಡ್ಡ ಆಘಾತಕ್ಕೆ ಕಾರಣವಾಯಿತು.
ಹಿಮಾಚಲದ ಧರ್ಮಶಾಲಾದಲ್ಲಿ ನಡೆದ ಮಳೆಯ ಅಡ್ಡಿಯ ನಡುವೆ ನಡೆದ ಪಂದ್ಯದಲ್ಲಿ 43 ಓವರ್‌ಗಳಲ್ಲಿ 246 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 207 ರನ್ ಗಳಿಗೆ ಆಲೌಟ್ ಆಯಿತು.
ಲೋಗನ್ ವ್ಯಾನ್ ಬೀಕ್ ಮೂರು ವಿಕೆಟ್ ಗಳನ್ನು ಪಡೆದರೆ ಡಚ್ ಪರ ಬಾಸ್ ಡಿ ಲೀಡೆ, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ ಎರಡು ವಿಕೆಟ್ ಪಡೆದರು. ಟೆಂಬಾ ಬವುಮಾ (18), ಕ್ವಿಂಟನ್ ಡಿ ಕಾಕ್ (20), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (4), ಏಡೆನ್ ಮಾರ್ಕ್ರಾಮ್ (1), ಮತ್ತು ಹೆನ್ರಿಕ್ ಕ್ಲಾಸೆನ್ (28) ರನ್‌ಗಳಿಸಿದರು ಹಾಗೂ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದರು.
ಇದಕ್ಕೂ ಮೊದಲು, ತೆಂಬಾ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮಳೆಯ ಅವಕಾಶದ ಲಾಭ ಪಡೆಯಲು ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ಅನ್ನು 200 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವ ಹಂತದಲ್ಲಿತ್ತು, ಆದರೆ ಕೊನೆಯ ಹತ್ತು ಓವರ್‌ಗಳಲ್ಲಿ ಸ್ಕಾಟ್ ಎಡ್ವರ್ಡ್ಸ್ (78), ರೋಲೋಫ್ ವ್ಯಾನ್ ಡೆರ್ ಮೆರ್ವೆ (29), ಮತ್ತು ಆರ್ಯನ್ ದತ್ (23) ಅವರ ಆಟದ ನೆರವಿನಿಂದ ತಂಡದ ಮೊತ್ತ 43 ಓವರ್‌ಗಳಲ್ಲಿ 245/8 ಕ್ಕೆ ತಲುಪಿತು.
ನಿಮ್ಮ ಕಾಮೆಂಟ್ ಬರೆಯಿರಿ