ನವಂಬರ್‌ 1ರಿಂದ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

ಶಿರಸಿ: ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವಂಬರ್‌ 1ರಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿ-ಕುಮಟಾ ಮಾರ್ಗದ ರಾಷ್ಟ್ರೀಯ ಹೆದ್ದಾರಿ 766(E)ಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ.
ಬುಧವಾರ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಅಧ್ಯಕ್ಷತೆಯಲ್ಲಿ ಗುತ್ತಿಗೆದಾರ ಕಂಪನಿ ಆರ್. ಎನ್. ಎಸ್ ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ..
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆಗಳು ಮತ್ತು ದೇವಿಮನೆ ಘಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಬೇಕಾಗಿರುವುದರಿಂದ ನವೆಂಬರ್ 1 ರಿಂದ 2024 ಮೇ 31 ರ ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಸಹಾಯಕ ಆಯುಕ್ತ ದೇವರಾಜ ಆರ್. ತಿಳಿಸಿದ್ದಾರೆ.
ಆರ್.ಎನ್.ಎಸ್ ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರ ರಸ್ತೆ ಕಾಮಗಾರಿಗಾಗಿ ಈ ಹೆದ್ದಾರಿ ಬಂದ್ ಮಾಡುವಂತೆ ಕೋರಿತ್ತು.. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಶಿರಸಿ ವಿಭಾಗದಲ್ಲಿ 33 ಕಿ.ಮೀ ಪೈಕಿ 25 ಕಿ.ಮೀ ರಸ್ತೆ ಕಾಮಗಾರಿ ಆಗಿದೆ. 2.84 ಕಿ.ಮಿ. ಒಂದು ಕಡೆ ರಸ್ತೆಯಾಗಿದೆ. ಉಳಿದಂತೆ 6.18 ಕಿ.ಮೀ ರಸ್ತೆ ಆಗಬೇಕಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ, 9 ಸೇತುವೆ ನಿರ್ಮಾಣ ಆಗಬೇಕಿದೆ. ಅಲ್ಲದೆ, ದೇವಿಮನೆ ಘಾಟ್ ನಲ್ಲಿ ಕಾಮಗಾರಿ ನಡೆಯಬೇಕಿದೆ. ಸೇತುವೆ ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ಬಂದ್‌ ಮಾಡುವುದು ಅತ್ಯವಶ್ಯವಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನ, ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರದ ವಾಹನ, ಶಿರಸಿ-ಯಾಣ-ವಡ್ಡಿ-ಕುಮಟಾ ಮಾರ್ಗದಲ್ಲಿ ಲಘು ವಾಹನ, ಶಿರಸಿ-ಯಲ್ಲಾಪುರ-ಅಂಕೋಲಾ ಮಾರ್ಗದಲ್ಲಿ ಎಲ್ಲ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾಣ ಮತ್ತು ದೊಡ್ಮನೆ ಮಾರ್ಗದ ರಸ್ತೆ ಕಿರಿದಾಗಿದ್ದರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆ ಮಾರ್ಗದಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಸ್ಥಳೀಯ ಬಸ್‌ಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದು, ದೂರ ಮಾರ್ಗಗಳ ಬಸ್‌ಗಳು ಮಾವಿನಗುಂಡಿ ಮತ್ತು ಯಲ್ಲಾಪುರ ಮಾರ್ಗದಲ್ಲಿ ತೆರಳಬೇಕು ಎಂದರು.

ಪ್ರಮುಖ ಸುದ್ದಿ :-   ಕನ್ನಡದ ಖ್ಯಾತ ನಟ ಸರಿಗಮ ವಿಜಿ ನಿಧನ

ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯು ಈ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತಿದ್ದು, ಸಮಯದಲ್ಲಿ 15ದಿನ ಲಘು ವಾಹನಗಳಿಗೆ ದೇವಿಮನೆ ಘಾಟ್ ನಲ್ಲಿ ಸಂಚಾರ ನಡೆಸಲು ಅನುವು ಮಾಡಿಕೊಡಬೇಕು.ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು. ಮುಂದಿನ ತಿಂಗಳಿನಿಂದಲೇ ಘಾಟ್ ಸೆಕ್ಷನ್ ಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿ, ಚುರುಕಾಗಿ ಕೆಲಸ ನಡೆಸುವಂತೆ ಆರ್. ಎನ್. ಎಸ್ ಕಂಪನಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬದಲಿ ಮಾರ್ಗಗಳು….
ಹೊನ್ನಾವರ-ಮಾವಿನಗುಂಡಿ- ಸಿದ್ದಾಪುರ ಮಾರ್ಗ ವಾಗಿ ಶಿರಸಿಗೆ ಎಲ್ಲ ತರಹದ ವಾಹನ ಸಂಚಾರ ಕ್ಕೂ ಅವಕಾಶ
ಅಂಕೋಲಾ-ಯಲ್ಲಾಪುರ-ಶಿರಸಿಗೆ ಎಲ್ಲ ತರಹದ ವಾಹನ ಸಂಚಾರ ಕ್ಕೆ ಅವಕಾಶ.
ಕುಮಟಾ- ದೊಡ್ಮನೆ ಘಾಟ್ -ಸಿದ್ದಾಪುರ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ
ಶಿರಸಿ-ಯಾಣ-ವಡ್ಡಿ ಮಾರ್ಗವಾಗಿ ಕುಮಟಾಕ್ಕೆ ಸೇರುವ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಮಾತ್ರ ಅವಕಾಶ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement