ಲಕ್ನೋ : ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡಿದ ಆರೋಪಿತ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಶಾಲೆಯ ಪ್ರಾಂಶುಪಾಲರಾದ ಮೀರಾ ಯಾದವ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ನೌಕರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1999 ರ ಅಡಿಯಲ್ಲಿ ಶನಿವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಶಾಲೆಯ ಆಡಳಿತದ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಶಿಕ್ಷಣ ಇಲಾಖೆ ಘಟನೆಯ ಬಗ್ಗೆ ತನಿಖೆ ಆರಂಭಿಸಿತ್ತು.
ಇಲ್ಲಿನ ನೇಪಿಯರ್ ರಸ್ತೆಯ ಪ್ರಾಥಮಿಕ ಶಾಲೆಯಲ್ಲಿ ಬೋಧನಾ ಕಾರ್ಯವನ್ನು ಹೊರತುಪಡಿಸಿ ಕೆಲವು ಅಪರಿಚಿತ ವ್ಯಕ್ತಿಗಳು ಇತರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಶುಕ್ರವಾರ ಕೆಲವು ಮಕ್ಕಳು ಇಲಾಖಾ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಮಾಜ್ ಮಾಡಿದ್ದಾರೆ ಎಂದು ಶಿಕ್ಷಕರು ಖಚಿತಪಡಿಸಿದ್ದಾರೆ ಎಂದು ಮೂಲ ಶಿಕ್ಷಾ ಅಧಿಕಾರಿ ಅರುಣಕುಮಾರ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಇಬ್ಬರು ಶಿಕ್ಷಕಿಯರಾದ ತೆಹಝೀನ್ ಫಾತಿಮಾ ಮತ್ತು ಮಮತಾ ಮಿಶ್ರಾ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ