ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಅನ್ನು ಕುತ್ತಿಗೆ ಸರದಲ್ಲಿ ಧರಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಎಸಿಜೆಎಂ ಕೋರ್ಟ್ ನ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಇಂದು ಸೋಮವಾರ ವರ್ತೂರು ಸಂತೋಷ ಅವರನ್ನು ಅರಣ್ಯಾಧಿಕಾರಿಗಳು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಕೋರ್ಟ್ ರಜೆ ಇದ್ದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಲಾಯಿತು.
ನ್ಯಾಯಾಂಗ ಬಂಧನ ವಿಧಿಸಿದ ನಂತರ ವರ್ತೂರು ಸಂತೋಷ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗುತ್ತದೆ. ಸಂತೋಷ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಗೆ ಬುಧವಾರ ದಿನ ನಿಗದಿಯಾಗಿದೆ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ವರ್ತೂರು ಸಂತೋಷ ಬಂಧನವಾಗಿದೆ. ಅವರು ಕುತ್ತಿಗೆಯಲ್ಲಿ ಧರಿಸಿದ್ದ ಹುಲಿಯ ಉಗುರು ಇರುವ ಲಾಕೆಟ್ ಕುರಿತು ಶರತ್ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದ ಬಂಧಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ