ರಾಜಸ್ಥಾನದ ಭರತಪುರದಲ್ಲಿ ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದಾಮೋದರ ಎಂಬಾತ ತನ್ನ ಸಹೋದರ ನಿರ್ಪತ್ ಮೇಲೆ ಸಾಯುವವರೆಗೂ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ ಎಂದು ಹೇಳಲಾಗಿದ್ದು, ದಾಮೋದರನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭರತಪುರದಲ್ಲಿ ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಅವರ ಕುಟುಂಬಗಳ ನಡುವೆ ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದ ಜಗಳವಿದೆ. ಸೋಮವಾರ ಬೆಳಿಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬವು ವಿವಾದಿತ ಪ್ಲಾಟ್‌ಗೆ ಟ್ರ್ಯಾಕ್ಟರ್‌ನಲ್ಲಿ ತಲುಪಿದೆ. ಸ್ವಲ್ಪ ಸಮಯದ ನಂತರ ಅತಾರ್ ಸಿಂಗ್ ಅವರ ಕುಟುಂಬವೂ ಬಂದಿದೆ.
ಕೂಡಲೇ ಎರಡು ಕುಟುಂಬಗಳು ಪರಸ್ಪರ ಘರ್ಷಣೆಗೆ ಹೊಡೆದಾಟಕ್ಕೆ ಇಳಿದಿದ್ದು, ಪರಸ್ಪರ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಘರ್ಷಣೆಯ ಸಮಯದಲ್ಲಿ, ಅತಾರ್ ಸಿಂಗ್ ಅವರ ಪುತ್ರರಲ್ಲಿ ಒಬ್ಬರಾದ ನಿರ್ಪತ್ ನೆಲಕ್ಕೆ ಬಿದ್ದಾಗ, ಆತನ ಸಹೋದರ ನಿರ್ಪರ್ ಸಿಂಗ್ ಸಾಯುವವರೆಗೂ ಆತನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರೂ, ದಾಮೋದರ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ನಿರಾಕರಿಸಿದ್ದಾನೆ ಮತ್ತು ಸ್ಥಳದಲ್ಲೇ ತನ್ನ ಸಹೋದರನನ್ನು ಬರ್ಬರವಾಗಿ ಕೊಂದಿದ್ದಾನೆ.
ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಐದು ದಿನಗಳ ಹಿಂದೆ ಎರಡು ಕುಟುಂಬಗಳು ಮಧ್ಯೆ ಘರ್ಷಣೆ ನಡೆದಿದ್ದವು, ಬಹದ್ದೂರ್ ಸಿಂಗ್ ಮತ್ತು ಅವರ ಕಿರಿಯ ಸಹೋದರ ಜನಕ್ ಗಾಯಗೊಂಡಿದ್ದರು. ಅತಾರ್ ಸಿಂಗ್ ಅವರ ಪುತ್ರ ನಿರ್ಪತ್ ಸೇರಿದಂತೆ ಅವರ ಕುಟುಂಬದ ವಿರುದ್ಧ ಬಹದ್ದೂರ್ ಸಿಂಗ್ ಕುಟುಂಬವು ಪ್ರಕರಣ ದಾಖಲಿಸಿತ್ತು.
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
.
ನಿಮ್ಮ ಕಾಮೆಂಟ್ ಬರೆಯಿರಿ