ಬೆಳಗಾವಿಗೆ ನುಗ್ಗಲು ಯತ್ನಿಸಿದ 50ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರ ಬಂಧನ

ಬೆಳಗಾವಿ : ಬೆಳಗಾವಿ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ 50 ಕ್ಕೂ ಹೆಚ್ಚು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸದಸ್ಯರನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಲಾಗಿದೆ.
ಬುಧವಾರ ಬೆಳಗ್ಗೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿದ್ದ ‘ಕಪ್ಪು ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಬರುತ್ತಿದ್ದಾಗ ಅವರನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಲಾಗಿದೆ.
ಬೆಳಗಾವಿ ಮತ್ತು 840 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸಲು ಕ್ರಮ ಕೈಗೊಳ್ಳದ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ (NH) 48 ರ ಸಂಚಾರ ಸ್ಥಗಿತಗೊಳಿಸಲು ಮುಂದಾದ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಾನೆ ಸೇರಿದಂತೆ 50 ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಕಾಗಲ್‌ಗೆ ಕರೆದೊಯ್ದರು.
ಕನ್ನಡ ರಾಜ್ಯೋತ್ಸವದ ಆಚರಿಸಿರುವುದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ‘ಕಪ್ಪು ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಂಇಎಸ್ ಹಲವು ಮಹಾರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿತ್ತು.
ಬೆಳಗಾವಿ ಜಿಲ್ಲಾಡಳಿತವು ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಲೋಕಸಭಾ ಸಂಸದರನ್ನು ನವೆಂಬರ್ 2 ರವರೆಗೆ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಎಂಇಎಸ್‌ಗೆ ‘ಕರಾಳ ದಿನ’ ಆಚರಿಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ, ಕಾರ್ಯಕ್ರಮಕ್ಕೆ ಮುಂದಾದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಗಡಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಮುಖ ಸುದ್ದಿ :-   ನಕಲಿ ನೋಟು ಜಾಲ : ಕರ್ನಾಟಕದ ಬಳ್ಳಾರಿ ಸೇರಿ 4 ರಾಜ್ಯಗಳಲ್ಲಿ ಏಕಕಾಲದಲ್ಲಿ ಎನ್‌ ಐ ಎ ದಾಳಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement