ವಿಶ್ವಕಪ್‌ 2023 : ನೆದರ್ಲೆಂಡ್ಸ್ ವಿರುದ್ಧ ಅಫ್ಘಾನಿಸ್ಥಾನಕ್ಕೆ ಭರ್ಜರಿ ಜಯ; ಚಿಗುರಿದ ಸೆಮಿಫೈನಲ್ ಕನಸು…!

ಲಕ್ನೋ : ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ನೆದರ್ಲೆಂಡ್ಸ್ ವಿರುದ್ಧ 7 ವಿಕೆಟ್ ಗಳ ಅಮೋಘ ಜಯ ಸಾಧಿಸಿದ ನಂತರ ಅದರ ಸೆಮಿ ಫೈನಲ್ ಆಸೆ ಚಿಗುರಿದೆ.. ಅಫ್ಘಾನ್ 7 ನೇ ಪಂದ್ಯಗಳಲ್ಲಿ 4 ನೇ ಗೆಲುವು ಸಾಧಿಸಿದ್ದು ಆದರೆ ಮುಂದಿನ ಪಂದ್ಯಗಳಲ್ಲಿ ಬಲಾಢ್ಯ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರು ಸೆಣೆಸಬೇಕಿದೆ. ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ಸಹ ತಲಾ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿವೆ, ಪಾಕಿಸ್ತಾನ ಮೂರರಲ್ಲಿ ಜಯಗಳಿಸಿದೆ. ಅಫ್ಘಾನಿಸ್ತಾನದ ಗೆಲುವಿನಿಂದ ಪಾಕಿಸ್ತಾನ ಸೆಮಿಫೈನಲ್‌  ಪ್ರವೇಶಿಸುವ
ಅವಕಾಶಕ್ಕೆ ಹಿನ್ನಡೆಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲೆಂಡ್ಸ್ ತಂಡ ನೀಡಿದ 180 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಅಫ್ಘಾನ್ ತಂಡ 31.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ನೆದರ್ಲೆಂಡ್ಸ್ ತಂಡದ ಪರ ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ಅರ್ಧಶತಕ ಬಾರಿಸಿದರೂ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ತಂಡ ವಿಫಲವಾಯಿತು.

ಎಂಗೆಲ್‌ಬ್ರೆಕ್ಟ್ (86 ಎಸೆತಗಳಲ್ಲಿ 58) ನೆದರ್ಲೆಂಡ್ಸ್‌ನ ಇನ್ನಿಂಗ್ಸ್‌ಗೆ ಆಸರೆಯಾದರು. ನಂತರ ಡಚ್ ಮಧ್ಯ ಇನ್ನಿಂಗ್ಸ್ ಕುಸಿತವನ್ನು ಅನುಭವಿಸಿತು. ಮ್ಯಾಕ್ಸ್ ಒ’ಡೌಡ್ (40 ಎಸೆತಗಳಲ್ಲಿ 42) ಮತ್ತು ಕಾಲಿನ್ ಅಕರ್‌ಮನ್ (29) ಔಟಾದರು. ಮೊಹಮ್ಮದ್ ನಬಿ 3 ವಿಕೆಟ್ , ನೂರ್ ಅಹ್ಮದ್ 2 ವಿಕೆಟ್ ಪಡೆದರು. 179 ರನ್‌ಗಳಿಗೆ ಆಲೌಟ್ ಮಾಡಿತು. ತಂಡದಲ್ಲಿ ಪ್ರಮುಖ ನಾಲ್ಕು ಬ್ಯಾಟರ್‌ಗಳು ರನ್‌ ಔಟ್‌ ಆಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಆರಂಭಿಕ ಆರು ವಿಕೆಟ್‌ ಕಳೆದುಕೊಂಡಿದ್ದರಲ್ಲಿ ನಾಲ್ಕು ವಿಕೆಟ್‌ಗಳನ್ನು ರನ್‌ ಮೂಲಕವೇ ನೆದರ್ಲೆಂಡ್ಸ್ ಕಳೆದುಕೊಂಡಿತು. ಅದರ ಅತ್ಯುತ್ತಮ ಬ್ಯಾಟರ್‌ಗಳೇ ರನ್‌ ಔಟ್‌ ಆದರು. ಇದರಿಂದ ಅದಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಫ್ಘಾನಿಸ್ತಾನ ತಂಡದ ಪರ ರಹಮಾನುಲ್ಲಾ ಗುರ್ಬಾಜ್ 10 ರನ್, ಇಬ್ರಾಹಿಂ ಜದ್ರಾನ್ 20 ರನ್ ಗಳಿಸಿ ಔಟಾದರು. ಸಮಯೋಚಿತ ಆಟವಾಡಿದ ರಹಮತ್ ಶಾ 52 ರನ್ ಗಳಿಸಿ ಔಟಾದರು. ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೆ 56 ರನ್ ಗಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಔಟಾಗದೆ 31 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement