ಲೋಕಸಭಾ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾದ ಕರ್ನಾಟಕದ ನಾಯಕರ ʼಸಿಎಂ ಕುರ್ಚಿʼ ಜಗಳ

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ ಒಡಕು ಹಾಗೂ ಅಸಮಾಧಾನ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಈಗ ಎರಡು ಬಣಗಳ ನಡುವೆ ಈಗ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಹೇಳಿಕೆಗಳ ಸಮರ ಜೋರಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿರುವುದು ಮತ್ತೊಮ್ಮೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನದ ಕುರಿತಾಗಿ ಯಾರೂ ಏನೂ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್‌ ಪಕ್ಷದ ನಾಯಕರಿಗೆ ಸೂಚಿಸಿದ ನಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಹೇಳಿಕೆ ಬಂದಿದೆ.
ಸಿದ್ದರಾಮಯ್ಯನವರ ಹೇಳಿಕೆ ಪತ್ರಕರ್ತರ ಪ್ರಶ್ನೆಗೆ ಉತ್ತರವಾಗದೆ ಇರಬಹುದು ಆದರೆ, ನುರಿತ ರಾಜಕಾರಣಿಯಾಗಿರುವ ಸಿದ್ದರಾಮಯ್ಯನವರ ಈ ಹೇಳಿಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬ್ಯಾಟಿಂಗ್ ಮಾಡುವ ನಾಯಕರಿಗೆ ಇದು ಕರ್ನಾಟಕದ ʼಬಾಸ್ʼ ಯಾರು ಎಂದು ನೀಡಿದ ಬಲವಾದ ಸಂದೇಶವಾಗಿದೆ.
bimba pratibimbaಕರ್ನಾಟಕವನ್ನು ಮುನ್ನಡೆಸಲು ಸಿದ್ದರಾಮಯ್ಯ ಸೂಕ್ತ ಎಂದು ಕಾಂಗ್ರೆಸ್ ಹೈಕಮಾಂಡ್‌ ನಿರ್ಧರಿಸಿದ ನಂತರ ಶಿವಕುಮಾರ ಮತ್ತು ಸಿದ್ದರಾಮಯ್ಯ ಇಬ್ಬರೂ ಸರದಿಯ ಆಧಾರದ ಮೇಲೆ ತಲಾ 30 ತಿಂಗಳವರೆಗೆ ಮುಖ್ಯಮಂತ್ರಿಯಾಗುವ ಸೂತ್ರದ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಆಯ್ಕೆ ನಡೆದಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ಊಹಾಪೋಹಗಳಿವೆ. ಇದನ್ನು ಪಕ್ಷದ ವಲಯದಲ್ಲಿ ಹಲವರು ಅಲ್ಲಗಳೆದರೆ ಹಲವರು ಈ ಸೂತ್ರ ಮುಂದಿಟ್ಟೇ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ ಎಂದು ಹೇಳುತ್ತಾರೆ. ಆದರೆ ಈವರೆಗೆ ಬೇರೆ ಬೇರೆ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ತಮ್ಮ ನಾಯಕರ ಪರವಾಗಿ ಬ್ಯಾಟ್‌ ಬೀಸುತ್ತಿದ್ದರೂ ಸಿದ್ದರಾಮಯ್ಯ ಅವರು ಈ ತರಹದ ಹೇಳಿಕೆ ನೀಡಿರಲಿಲ್ಲ. ಐದು ವರ್ಷಗಳ ವರೆಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಅವರು ದೃಢವಾಗಿ ಪ್ರತಿಪಾದಿಸಿರುವುದು ಇದೇ ಮೊದಲು.

ಇದೇ ವೇಳೆ ಮೂವರು ಉಪಮುಖ್ಯಮಂತ್ರಿಗಳಾಗುತ್ತಾರೆ ಎಂಬ ಊಹಾಪೋಹದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, “ಯಾರು ಹೇಳಿದರು? ನಮ್ಮದು ರಾಷ್ಟ್ರೀಯ ಪಕ್ಷ. ಅಂತಹ ವಿಷಯಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಜತೆ ಚರ್ಚಿಸದೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ ಅವರು ಬೆಂಗಲಲೂರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ಮತ್ತಿತರ ಪಕ್ಷದ ಪ್ರಮುಖರ ಜೊತೆಗೆ ಸಭೆ ನಡೆಸಿದ ನಂತರ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಕುರಿತು ಬಹಿರಂಗ ಹೇಳಿಕೆ ನೀಡುವ ಕುರಿತು “ಪಕ್ಷದ ಲಕ್ಷ್ಮಣ ರೇಖೆಯನ್ನು ದಾಟಬೇಡಿ, ಯಾರೇ ದಾಟಿದರೂ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆ ಬಂದಿದೆ.
ಲೋಕಸಭೆ ಚುನಾವಣೆ ಹೊತ್ತಿಲಲ್ಲಿ ಹಾಗೂ ರಾಜ್ಯ ಭೀಕರ ಬರ ಎದುರಿಸುತ್ತಿರುವಾಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಎರಡೂ ಪಾಳಯಗಳ ಶಾಸಕರು ನಾಯಕತ್ವ ಬದಲಾವಣೆ ಕುರಿತು ಹಲವು ಹೇಳಿಕೆಗಳನ್ನು ನೀಡುತ್ತಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಇವರ ಬೆಂಬಲಿಗರ ಬಾಯ್ಮುಚ್ಚಿಸುವುದು ಸವಾಲಾಗಿ ಪರಿಣಮಿಸಿದೆ.
ಇತ್ತೀಚೆಗಷ್ಟೇ ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಅವರು ಮುಂದಿನ ವರ್ಷಗಳಲ್ಲಿ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅದರ ನಂತರ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿಕೆ ನೀಡಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

ನಂತರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ರಾಜ್ಯದಲ್ಲಿ ಸಮುದಾಯದ ಮುಖಂಡರಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನೀಡಲು ಮೂರು ಉಪಮುಖ್ಯಮಂತ್ರಿಗಳ ಹುದ್ದೆಗಳನ್ನು ರಚಿಸಬೇಕು ಎಂದು ಪ್ರಸ್ತಾಪಿಸುವ ಮೂಲಕ ಮತ್ತಷ್ಟು ಗೊಂದಲ ಮೂಡಿಸಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಚುನಾವಣಾ ದೃಷ್ಟಿಯಿಂದ ಈ ರೀತಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದು ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ ಪಕ್ಷದ ನಾಯಕರಿಗೆ ಈ ರೀತಿಯ ಬಹಿರಂಗ ಹೇಳಿಕೆ ನೀಡಬೇಡಿ ಎಂದು ತಾಕೀತು ಮಾಡಿದರು.
ಇದಾದ ನಂತರ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಸಿದ್ದರಾಮಯ್ಯ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಇದರ ನಂತರ
ಶಿವಕುಮಾರ ಅವರ ನಿಕಟವರ್ತಿ ಎಂದೇ ಹೇಳಲಾಗುವ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಿಂದುಳಿದ ವರ್ಗಗಳು, ಮುಸ್ಲಿಮರು ಮತ್ತು ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಅವರನ್ನು ಮರೆತಿದ್ದಾರೆ ಎಂದು ಹರಿಪ್ರಸಾದ ಹೇಳಿದರು.

ಅಲ್ಲದೆ,”ಹುಬ್ಲೋಟ್ ವಾಚ್, ಧೋತಿ, ಖಾದಿ ಅಂಗಿ ಹಾಕಿಕೊಂಡರೆ ಸಮಾಜವಾದಿಯಾಗುವುದಿಲ್ಲ” ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಹಾಗೂ ದಲಿತರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ಸಿದ್ದರಾಮಯ್ಯ ಅವರೇ ನಿರ್ಧಾರ ಕೈಗೊಳ್ಳಲಿ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಯನ್ನು ಕೆಳಗಿಳಿಸುವುದು ಹೇಗೆ ಎಂದು ನಮಗೆ ತಿಳಿದಿದೆ ಎಂದೂ ಹೇಳಿದರು.
ಇದಾದ ಕೆಲ ದಿನಗಳ ನಂತರ ಅಂದರೆ ಕಳೆದ ಬುಧವಾರ ಕಾಂಗ್ರೆಸ್‌ನ ಮಂಡ್ಯ ಶಾಸಕ ರವಿ ಗಣಿಗ ಅವರು ಸರ್ಕಾರ ಅಧಿಕಾರದ ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಬುಧವಾರ ಹೇಳಿದ್ದು, ಕಾಂಗ್ರೆಸ್ಸಿನ ಗುಂಪುಗಳ ಆಂತರಿಕ ಕಚ್ಚಾಟದ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿತು. ಇದರ ಬೆನ್ನಿಗೇ ಕಾಂಗ್ರೆಸ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಹೈಕಮಾಂಡ್‌ ಅವಕಾಶ ನೀಡಿದರೆ ಮುಖ್ಯಮಂತ್ರಿಯಾಗಲು ಸಿದ್ಧ ಎಂಬ ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ಸಚಿವ ಕೆ.ಎನ್‌.ರಾಜಣ್ಣ ಅವರು ಮುಖ್ಯಮಂತ್ರಿ ಹುದ್ದೆಗೆ ಡಾ.ಜಿ.ಪರಮೇಶ್ವರ ಅವರ ಹೆಸರನ್ನು ಮಂಚೂಣಿಗೆ ತಂದರು. ಕಾಂಗ್ರೆಸ್‌ನಲ್ಲಿ ಈವರೆಗೂ ಸಿದ್ದರಾಮಯ್ಯ ಅಲ್ಲದಿದ್ದರೆ ಗೃಹ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು ಸಹ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ಈ ಮಧ್ಯೆ ಪ್ರಿಯಾಂಕ ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದು, ಹೈಕಮಾಂಡ್ ಯಾರನ್ನೇ ಸಿಎಂ ಮಾಡುತ್ತೇವೆ ಎಂದರೂ ನಮ್ಮ ಒಪ್ಪಿಗೆ ಇರುತ್ತದೆ, ವರದಿಗಾರನನ್ನೇ ಸಿಎಂ ಮಾಡುತ್ತೇವೆ ಎಂದು ಹೈಕಮಾಂಡ್ ಹೇಳಿದರೂ ನಾನು ಅದಕ್ಕೂ ಯಸ್‌ ಎನ್ನುತ್ತೇನೆ ಎನ್ನುವುದಷ್ಟೇ ನನ್ನ ಮಾತಿನ ಅರ್ಥ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ದಸರಾ ಸಮಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ಗುದ್ದಾಟ ನಡೆದಿದೆ.
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ತಮ್ಮ ಕ್ಷೇತ್ರದ ಸಿಬ್ಬಂದಿ ವರ್ಗಾವಣೆಯ ವಿಷಯವನ್ನು ಪ್ರತಿಷ್ಠೆಯಾಗಿ ಮಾಡಿಕೊಂಡು ಜಿದ್ದಾಜಿದ್ದಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ಆಪ್ತರೆನ್ನಲಾದ ಸತೀಶ ಜಾರಕಿಹೊಳಿ ಹಾಗೂ, ಶಿವಕುಮಾರ ಅವರ ಗುಂಪಿನಲ್ಲಿರುವ ಹೆಬ್ಬಾಳ್ಕರ್ ಅವರು ತಮ್ಮತಮ್ಮ ನಾಯಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿಯೂ ಕಾಂಗ್ರೆಸ್‌ ನಾಯಕರಲ್ಲಿ ಪರಸ್ಪರ ಅಸಮಾಧಾನಗಳು ಬಹಿರಂಗಗೊಂಡಿವೆ. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಯಾವುದೇ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೆ ಕಡೆಗಣಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ.
ಇವೆಲ್ಲವನ್ನೂ ಸರಿಮಾಡಿಕೊಂಡು ಹೋಗಲು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಶನಿವಾರ (ನವೆಂಬರ್‌ 4) ಸಚಿವರ ಸಭೆ ಕರೆದಿದ್ದರಲ್ಲಿ ಇದರಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ ಸೇರಿದಂತೆ 16 ಸಚಿವರು ಭಾಗಿಯಾಗಿದ್ದಾರೆ. ಮುಖ್ಯವಾಗಿ ಪಕ್ಷದಲ್ಲಿನ ಕೆಲ ನಾಯಕರ ವಿರುದ್ಧ ಬೇಸರಗೊಂಡಿರುವ ಸಚಿವ ಸತೀಶ ಜಾರಕಿಹೊಳಿಯವರು ಈ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಗೆ ಗೈರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ಉಂಟಾಗಿರುವ ಗೊಂದಲಗಳಿಗೆ ಬ್ರೇಕ್‌ ಹಾಕಲು ಮುಂದಾಗಿದ್ದು, ಬಹಿರಂಗ ಹೇಳಿಕೆಯನ್ನ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಮುನ್ನ ಒಗ್ಗಟ್ಟು ಪ್ರದರ್ಶಿಬೇಕಾದ ಕಾಂಗ್ರೆಸ್‌ನಲ್ಲಿ ಬಣದಗಳ ಮೇಲಾಟದ ಸ್ಪರ್ಧೆ ಜೋರಾದಂತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಒಳಗಿನ ಈ ಒಡಕು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement