ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ(37) ಎಂಬವರು ಕೊಲೆಯಾದ ಅಧಿಕಾರಿ. ಇವರು ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸುಬ್ರಮಣ್ಯಪುರ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಕುವೆಂಪು ನಗರದ ಗೋಕುಲ ಅಪಾರ್ಟ್‍ಮೆಂಟ್‍ನ ಪಕ್ಕದಲ್ಲಿರುವ ಮನೆಯೊಂದರಲ್ಲಿ ಪ್ರತಿಮಾ ಅವರು 5 ವರ್ಷಗಳಿಂದ ವಾಸಿಸುತ್ತಿದ್ದರು. ಇವರ ಪತಿ ಹಾಗೂ ಮಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಮಾ ಅವರು ಶನಿವಾರ ಎಂದಿನಂತೆ ಕೆಲಸಕ್ಕೆ ತೆರಳಿ ರಾತ್ರಿ 8 ಗಂಟೆ ಸುಮಾರಿಗೆ ಸರ್ಕಾರಿ ವಾಹನದಲ್ಲಿಯೇ ಮನೆಗೆ ಬಂದಿದ್ದಾರೆ. ಚಾಲಕ ಇವರನ್ನು ಮನೆ ಬಳಿ ಡ್ರಾಪ್ ಮಾಡಿ ತೆರಳಿದ್ದಾನೆ.
ಪ್ರತಿಮಾ ಅವರು ಮನೆಗೆ ಬರುವುದನ್ನೇ ಕಾದಿದ್ದ ದುಷ್ಕರ್ಮಿಗಳು ಕೆಲವೇ ನಿಮಿಷಗಳಲ್ಲಿ ಇವರ ಮನೆಗೆ ನುಗ್ಗಿ ಚಾಕುವಿನಿಂದ ಪ್ರತಿಮಾ ಅವರನ್ನು ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಮನೆಯ ಒಳಗೆ ಬಂದು ಕೊಲೆ ಮಾಡಿ ಪರಾರಿಯಾಗಿರುವ ಕಾರಣ ಮೇಲ್ನೋಟಕ್ಕೆ ಯೋಜಿತ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ನಕಲಿ ನೋಟು ಜಾಲ : ಕರ್ನಾಟಕದ ಬಳ್ಳಾರಿ ಸೇರಿ 4 ರಾಜ್ಯಗಳಲ್ಲಿ ಏಕಕಾಲದಲ್ಲಿ ಎನ್‌ ಐ ಎ ದಾಳಿ

ಸಹೋದರ ಮೊಬೈಲ್‍ಗೆ ರಾತ್ರಿ ಕರೆ ಮಾಡಿದಾಗ ಪ್ರತಿಮಾ ಅವರು ಸ್ವೀಕರಿಸಿರಲಿಲ್ಲ. ಎರಡು-ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಅವರು ಇಂದು ಭಾನುವಾರ ಬೆಳಿಗ್ಗೆಯೇ ಪ್ರತಿಮಾ ಅವರ ಮನೆಗೆ ಬಂದಿದ್ದಾರೆ. ಅವರು ಬಂದು ನೋಡಿದಾಗಲೇ ಸಹೋದರಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಸುಬ್ರಮಣ್ಯಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಮೊದಲೇ ಸಂಚು ರೂಪಿಸಿ ಪ್ರತಿಮಾ ಅವರು ಕಚೇರಿಯಿಂದ ಮನೆಗೆ ಬರುವುದನ್ನೇ ಕಾದಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಂತಕರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಇವರ ಮನೆಯ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿರುವ ದುಷ್ಕರ್ಮಿಗಳ ಚಹರೆಯನ್ನು ಆಧರಿಸಿ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಪ್ರಮುಖ ಸುದ್ದಿ :-   ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಸಾವು

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement