ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸದಾನಂದ ಗೌಡ…!

ಬೆಂಗಳೂರು : ‘ನಾನು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಎಂದು ತೀರ್ಮಾನ ಮಾಡಿದ್ದೇನೆ’ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ರಾಜಕೀಯಕ್ಕೆ ನಿವೃತ್ತಿ ಪ್ರಕಟಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಹೆಚ್ಚಿನ ಲಾಭ ಪಡೆದುಕೊಂಡಿದ್ದೇನೆ. ಈಗ ನನಗೆ ಹೆಚ್ಚಿನ ಅಸೆ ಏನೂ ಇಲ್ಲ. ಇನ್ಮುಂದೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಬಾರದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. 10 ವರ್ಷ ಶಾಸಕ, 20 ವರ್ಷ ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ಹೆಚ್ಚು ಫಲಾನುಭವಿ. 10 ವರ್ಷ ಶಾಸಕ, 20 ವರ್ಷ ಸಂಸದ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, ಐದು ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ ಏಳು ವರ್ಷ ನರೇಂದ್ರ ಮೋದಿ ಮಂತ್ರಿ ಮಂಡಳದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದೇನೆ. ಇಷ್ಟು ಸಿಕ್ಕಿ ಕೂಡ ಸಂತೋಷ ಪಡದ ರಾಜಕಾರಣಿ, ಅವನು ರಾಜಕಾರಣಿ ಅಲ್ಲ. ಅವನನ್ನು ಸ್ವಾರ್ಥಿ ಎಂದು ತಿಳಿದುಕೊಳ್ಳುತ್ತೇನೆ’ ಎನ್ನುವ ಮೂಲಕ ಸಕ್ರಿಯ ರಾಜಕಾರಣದಿಂದ ದೂರವುಳಿಯುವ ಬಗ್ಗೆ ಡಿ.ವಿ ಸದಾನಂದ ಗೌಡ ಮಾತನಾಡಿದ್ದಾರೆ.

ಪ್ರಮುಖ ಸುದ್ದಿ :-   ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ರಾಜ್ಯ ಸರ್ಕಾರ : ನಿರ್ಧಾರ ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಶಾಸಕ ಯತ್ನಾಳ

ಎಲ್ಲಾ ರಾಜಕೀಯ ಪಕ್ಷದಲ್ಲಿಯೂ ಹತ್ತು ಪರ್ಸೆಂಟ್ ರಾಜಕಾರಣಿಗಳು ಅಧಿಕಾರಕ್ಕಾಗಿ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುವವರಿದ್ದಾರೆ. ಏನೂ ಇಲ್ಲದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ಅವರ ಜೊತೆಗೂ ಹೋಗುವವರಿದ್ದಾರೆ. ಈ ರೀತಿ ಹೋಗುವಂತಹವರು ಎಲ್ಲ ಎಲ್ಲ ಪಾರ್ಟಿಯಲ್ಲಿದ್ದಾರೆ. ಅದರಿಂದ ನಮ್ಮ ಪಾರ್ಟಿ ಕೂಡ ಹೊರತಾಗಿಲ್ಲ ಎಂದು ಅವರು ಹೇಳಿದ್ದಾರೆ.
ಡಿ.ವಿ ಸದಾನಂದ ಗೌಡ ಪ್ರಸ್ತುತ ಬೆಂಗಳೂರು ಉತ್ತರ ಕ್ಷೇತ್ರದ ಸಂಸದನಾಗಿ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement