ರೆಕ್ಯಾವಿಕ್: ಐಸ್‌ಲೆಂಡ್‌ನಲ್ಲಿ ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಫೋಟಗೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದೆ. ಉತ್ತರದ ಗ್ರಿಂಡ್‌ವಿಕ್‌ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ’ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಗ್ರಿಂಡ್‌ವಿಕ್ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಅವರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ 5:30ರಿಂದ ಭೂಮಿ ಕಂಪಿಸಲು ಪ್ರಾರಂಭಿಸಿತು.
ಕಳೆದ ಅಕ್ಟೋಬರ್‌ನಿಂದ ಈವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಅದರಲ್ಲೂ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ. ಭೂಕಂಪ ಸಂಭವಿಸಿದ ಪ್ರದೇಶಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಲಾವಾರಸವು ಮೇಲೆ ಉಕ್ಕಿ ಹರಿಯುವ ಸಾಧ್ಯತೆ ಹೆಚ್ಚು’ ಎಂದು ಹೇಳಿದ್ದಾರೆ.
ಗ್ರಿಂಡ್‌ವಿಕ್‌ನಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನೆರವಿನ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ಮಾದರಿಯಲ್ಲಿ ದೇಶದ ಇತರ ಮೂರು ಕಡೆ ಇಂಥ ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ.
ಈ ಪ್ರಾಂತ್ಯದಲ್ಲಿ 2021ರಿಂದ ಈಚೆಗೆ ಮೂರು ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಐಸ್‌ಲೆಂಡ್‌ನಲ್ಲಿ ಒಟ್ಟು 33 ಸಕ್ರಿಯ ಭೂಕಂಪ ಮಾಪನ ಕೇಂದ್ರಗಳಿದ್ದು, ಯುರೋಪ್‌ನಲ್ಲಿ ಅತಿ ಹೆಚ್ಚು ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ