ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲೂ ಡೀಪ್ ಫೇಕ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್ ಫೇಕ್ (Deepfake) ಮೂಲಕ ಯಾರದೋ ನಗ್ನ ಚಿತ್ರಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್ಮೇಲ್ ಮಾಡಿದ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಫೋಟೋ ಈ ರೀತಿ ಎಡಿಟ್ ಮಾಡಿ ಬ್ಯ್ಲಾಕ್ಮೇಲ್ ಮಾಡಿದ್ದ ಆರೋಪಿ ಮಂಥನ್ ಪಾಟೀಲ (22) ಎಂಬಾತನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಅವರು ಪ್ರತಿಕ್ರಿಯೆ ನೀಡಿ, ಫೋಟೋ ಎಡಿಟ್ ಮಾಡಿ ಯುವತಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಮಂಥನ್ ಪಾಟೀಲ(22) ಎಂಬ ಯುವಕನ ಮೇಲೆ ಪ್ರಕರಣ ದಾಖಲಾಗಿತ್ತು. ಯುವತಿ ಆತನನ್ನು ಪ್ರೀತಿಸಲು ಒಪ್ಪಿರಲಿಲ್ಲ ಎಂಬ ಕಾರಣಕ್ಕೆ ಆತ ಈ ರೀತಿ ಕೃತ್ಯ ಮಾಡಿದ್ದಾನೆ ಎಂದು ತಿಳಿಸಿದರು.
ಪ್ರೀತಿ ಒಪ್ಪದ ಕಾರಣಕ್ಕೆ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಆತ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದ. ನಂತರ ಯುವತಿಯ ಹೆಸರಿನ ನಕಲಿ ಅಕೌಂಟ್ ತೆರೆದು ಡಿಪ್ ಫೇಕ್ ತಂತ್ರಜ್ಞಾನ ಬಳಸಿ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎಂದು ತಿಳಿಸಿದ್ದಾರೆ.
ಯುವತಿಯ ಮೇಲೆ ಒತ್ತಡ ಹೇರಲು ಆಕೆಯ ಮೂರು ಜನ ಸ್ನೇಹಿತೆಯರ ಫೋಟೋವನ್ನೂ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದ. ಈ ಬಗ್ಗೆ ಯುವತಿಯರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಈಗ ಮಂಥನ್ ಪಾಟೀಲನನ್ನು ಬಂಧಿಸಲಾಗಿದೆ. ಯಾರೇ ಆದರೂ ಇಂತಹ ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರೆ ದೂರು ನೀಡಬಹುದು ಅವರು ತಿಳಿಸಿದರು.
ಘಟನೆ ಹಿನ್ನಲೆ :
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಆರೋಪಿ ಮಂಥನ್ ಪಾಟೀಲ( 22) ಮತ್ತು ಯುವತಿ ಒಂದೇ ಊರಿನವರಾಗಿದ್ದಾರೆ. ಮಂಥನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದಿದ್ದ. ಆದರೆ ಯುವತಿ ಆತನಿಗೆ ಸೊಪ್ಪು ಹಾಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ಹಾಕಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದ.
ಆದರೂ ಯುವತಿ ಆತನ ಪ್ರೀತಿಯನ್ನು ಒಪ್ಪಿರಲಿಲ್ಲ. ಹೀಗಾಗಿ ಯುವತಿಯ ಮೇಲೆ ಮತ್ತಷ್ಟು ಒತ್ತಡ ಹೇರುವ ತಂತ್ರವಾಗಿ ಮಂಥನ್ ಯುವತಿ ಮತ್ತು ಆಕೆಯ ಗೆಳತಿಯರು ಇರುವ ಭಾವಚಿತ್ರ ತೆಗೆದುಕೊಂಡು ಬೇರೆಯವರ ನಗ್ನ ಚಿತ್ರವನ್ನು ಇವರ ಮುಖಕ್ಕೆ ಅಳವಡಿಸಿದ್ದ. ನಂತರ ನಕಲಿ ಖಾತೆ ತೆರೆದು ಎಡಿಟ್ ಮಾಡಿದ್ದ. ವಿಷಯ ಗೊತ್ತಾಗಿ ಯುವತಿಯರು ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ಪೋಷಕರು ಸಹ ಧರಣಿ ನಡೆಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ