ಚೀನಾದಲ್ಲಿ ಎಚ್‌9ಎನ್‌2 ಸೋಂಕು ಮಕ್ಕಳಲ್ಲಿ ಉಲ್ಬಣ : ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ : ಕೋವಿಡ್‌-19 ಬಳಿಕ ಚೀನಾದಲ್ಲಿ ಉಲ್ಬಣಕ್ಕೆ ಕಾರಣವಾಗಿರುವ ‘ಎಚ್‌9ಎನ್‌2’ (ಏವಿಯನ್‌ ಇನ್‌ಫ್ಲುಯೆಂಜಾ ವೈರಸ್‌) ಸೋಂಕು ಈಗ ವಿಶ್ವದಾದ್ಯಂತ ಆತಂಕ ಮೂಡಿಸಿದೆ.
ಉತ್ತರ ಚೀನಾದಲ್ಲಿ ಕಾಣಿಸಿಕೊಂಡಿರುವ ‘ಎಚ್‌9ಎನ್‌2’ ಸೋಂಕು ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
”ಚೀನಾದ ಬೀಜಿಂಗ್‌ ಹಾಗೂ ಲಿಯಾನಿಂಗ್‌ ನಗರಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವ ಎಚ್‌9ಎನ್‌2 ಪ್ರಕರಣಗಳು ಹಾಗೂ ಉಸಿರಾಟ ಸಮಸ್ಯೆಯ ಕಾಯಿಲೆಗಳಿಂದ ಭಾರತಕ್ಕೆ ತೀವ್ರ ಅಪಾಯ ಇಲ್ಲ. ಆದಾಗ್ಯೂ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
”ಕೋವಿಡ್‌ ಸಾಂಕ್ರಾಮಿಕದ ನಂತರ ದೇಶದಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಭಾರತವು ಯಾವುದೇ ರೀತಿಯ ಸಾರ್ವಜನಿಕ ಆರೋಗ್ಯದ ಅಗತ್ಯತೆಗಳಿಗೆ ಸಿದ್ಧವಾಗಿದೆ. ತುರ್ತು ಅಗತ್ಯದ ಸಂದರ್ಭದಲ್ಲಿ ಸಮಗ್ರ ಆರೋಗ್ಯ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಸನ್ನದ್ಧ ಸ್ಥಿತಿಯಲ್ಲಿರಲಿದೆ ” ಎಂದು ಸಚಿವಾಲಯ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಚೀನಾದ ಮಕ್ಕಳಲ್ಲಿ ಉಸಿರಾಟದ ತೊಂದರೆ ಮಾಡುವ ಸೋಂಕುಗಳ ಉಲ್ಬಣದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ದತ್ತಾಂಶಗಳ ವಿವರವಾದ ಮಾಹಿತಿ ನೀಡುವಂತೆ ಚೀನಾದ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಮತ್ತು ಪ್ರಿವೆನ್ಷನ್‌ ಮತ್ತು ಬೀಜಿಂಗ್‌ ಚಿಲ್ಡ್ರನ್ಸ್‌ ಹಾಸ್ಪಿಟಲ್‌ಗೆ ಸೂಚಿಸಿದೆ.
ಡಬ್ಲ್ಯೂಎಚ್‌ಒ ಮಾಹಿತಿ ಕೇಳಿದ ನಂತರ ಚೀನಾ, ”ಎಚ್‌9ಎನ್‌2 ಸೋಂಕು ಮಾರಣಾಂತಿಕವಲ್ಲ. ಸಾಂಕ್ರಾಮಿಕದ ಆತಂಕವಿಲ್ಲ. ಹಾಗೂ ಯಾವುದೇ ಹೊಸ ವೈರಸ್‌ಗಳು ಕಂಡುಬಂದಿಲ್ಲ. ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದೇವೆ ಎಂದು ಹೇಳಿದೆ.
ಮಕ್ಕಳಲ್ಲಿ ಕಂಡುಬಂದಿರುವ ಸೋಂಕು ಹೆಚ್ಚಳವು ಈಗಾಗಲೇ ಚೆನ್ನಾಗಿ ಪರಿಚಿತವಾಗಿರುವ ವೈರಸ್‌ಗಳ ಮಿಶ್ರಣದಿಂದ ಉಂಟಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಕೋವಿಡ್ ನಿರ್ಬಂಧ ಕ್ರಮಗಳನ್ನು ತೆರವುಗೊಳಿಸಿದ ನಂತರದ ಮೊದಲ ಸಂಪೂರ್ಣ ಚಳಿಗಾಲದ ಅವಧಿಯಾಗಿರುವುದರಿಂದ ಇದು ವ್ಯಾಪಕವಾಗಿ ಹರಡುತ್ತಿದೆ ಎಂದು ವಿವರಣೆ ನೀಡಿದೆ. ಹೊಸ ವೈರಸ್‌ನಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಲು ಹಚ್ಚಿನ ಪುರಾವೆ ಇಲ್ಲ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement