ಬೆಳಗಾವಿ : ಮೊಬೈಲ್ ಟವರ್ ವಿಷಯವಾಗಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ ಜವಳ್ಕರ್ ಅವರನ್ನು ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.
ಅವರ ಬಂಧನಕ್ಕೆ ಒತ್ತಾಯಿಸಿ ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ ಅವರ ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಅಭಿಜಿತ್ ಬಂಧನವಾಗಿದೆ ಎಂದು ತಿಳಿದು ಬಂದಿದೆ.
ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅಳವಡಿಕೆ ವಿಚಾರವಾಗಿ ನ.23ರಂದು ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ ಪಾಟೀಲ ಎಂಬವರ ಮಧ್ಯೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದರು.
ಹಲ್ಲೆ ಮಾಡಿದ ರಮೇಶ್ ಪಾಟೀಲ್ ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ನಂತರ ರಮೇಶ ಪಾಟೀಲ ಅವರನ್ನು ಬಂಧಿಸಲಾಗಿತ್ತು.
ಈ ನಡುವೆ ಭಾನುವಾರ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶ್ರೀರಾಮಸೇನೆ ಹಿಂದೂಸ್ತಾನ್ ಕಾರ್ಯಕರ್ತರು ಟಿಳಕವಾಡಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಅಭಿಜಿತ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಭಾಗ್ಯ ನಗರದ 9ನೇ ಕ್ರಾಸ್ನ ಮನೆ ಮೇಲೆ ಮೊಬೈಲ್ ಟವರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ, ರಮೇಶ ಪಾಟೀಲ ಅವರ ಮೇಲೆ ಹಲ್ಲೆ ನಡೆಸಿದ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಅಭಿಜಿತ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಮೊಬೈಲ್ ಟವರ್ ಅಳವಡಿಸಲು ಮುಂದಾಗಿದ್ದ ರಮೇಶ ಪಾಟೀಲ ಅವರ ಮೇಲೆ ಅಭಿಜಿತ ಜವಳಕರ ಹಲ್ಲೆ ನಡೆಸಿರುವುದು ಖಂಡನೀಯ. ಒಬ್ಬರ ಮನೆ ಮೇಲೆ ಮೊಬೈಲ್ ಟವರ್ ಅಳವಡಿಸುತ್ತಿರುವುದನ್ನು ತಪಾಸಿಸುವ ಅಧಿಕಾರ ಇವರಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದರು.
ಸ್ಥಳೀಯ ಶಾಸಕರ ಪ್ರಭಾವದಿಂದಾಗಿ ಪೊಲೀಸರು ರಮೇಶ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಹಿಂದಕ್ಕೆ ಪಡೆಯಬೇಕು. ತಕ್ಷಣವೇ ಅಭಿಜಿತ್ ಜವಳಕರ ಬಂಧಿಸಬೇಕು ಎಂದು ಆಗ್ರಹಿಸಿದ್ದರು. ನಂತರ ಪಾಲಿಕೆ ಸದಸ್ಯ ಅಭಿಜಿತ ಬಂಧನವಾಗಿದೆ.
ಪೊಲೀಸರು ಅಭಿಜಿತ್ ಅವರನ್ನು ಪೊಲೀಸರು ಬಂಧಿಸಿದ್ದು, ಅವರ ಮೇಲೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ 392 ರ ಅಡಿಯಲ್ಲಿ ಪ್ರಕರಣ ದಾಖಲಾಗಿಲಾಗಿದೆ. ರಮೇಶ ಪಾಟೀಲ ವಿರುದ್ಧವೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ